ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕಲಾಕಾರನಿಗೆ ಇಂತಹದ್ದೇ ಕ್ಯಾನ್ವಾಸ್ ಬೇಕೆಂದಿಲ್ಲ. ಕಲೆಯಲ್ಲಿ ಒಲವಿದ್ದರಾಯ್ತಷ್ಟೇ. ಅಂತಹದ್ದೊಂದು ಒಲವಿಗೆ ಹಣ್ಣುಗಳ ಮೂಲಕವೇ ಮೂರ್ತರೂಪ ದೊರೆತದ್ದು ಕೃಷಿಸಿರಿಯಲ್ಲಿ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಕರಕುಶಲ ವಸ್ತುಪ್ರದರ್ಶನದಲ್ಲಿ ಖ್ಯಾತನಾಮರ ಚಿತ್ರಗಳು ಹಣ್ಣು-ಹಂಪಲುಗಳಲ್ಲಿ ಒಡಮೂಡಿದ್ದವು. ಸುಭಾಷ್‌ಚಂದ್ರ ಭೋಸ್, ಸರ್.ಎಂ. ವಿಶ್ವೇಶ್ವರಯ, ಕುವೆಂಪು, ದ.ರಾ. ಬೇಂದ್ರೆ, ಸಂಗೊಳ್ಳಿ ರಾಯಣ್ಣ, ಪೇಜಾವರ ಶ್ರೀಗಳು, ಪುನೀತ್ ರಾಜ್‌ಕುಮಾರ್ ಚಿತ್ರಗಳು ವಿಶೇಷ ಎನ್ನಿಸಿದವು. ಅಲ್ಲದೇ ನವಿಲು, ಮೀನು, ಬಾತುಕೋಳಿ, ಮಂಗ, ಪಕ್ಷಿಗಳ ವಿನ್ಯಾಸಗಳೂ ಹಣ್ಣು-ಹಂಪಲುಗಳ ರೂಪದಲ್ಲಿ ಕಾಣಿಸಿಕೊಂಡವು.
ಹಣ್ಣುಗಳ ವಿನೂತನ ವಿನ್ಯಾಸಗಳಲ್ಲಿ ಶಿವ, ಪಾರ್ವತಿ, ಗಣೇಶ ದೇವರು ಹಾಗೂ ಕಾಂತಾರದ ಪಂಜುರ್ಲಿ ದೈವ, ಕಂಬಳ ದೃಶ್ಯಗಳು ಗಮನಸೆಳೆದವು. ಜೊತೆಗೆ ಒಂದೇ ಜಾತಿಯ ವಿವಿಧ ರೀತಿಯ ತೆಂಗಿನಕಾಯಿಗಳು ಮತ್ತು ಹಣ್ಣುಗಳೂ ಅಲ್ಲಿದ್ದವು.
ಅಲ್ಲದೇ ಒಂದೇ ಜಾತಿಯ ಹಲವು ವಿವಿಧ ಹಣ್ಣುಗಳಾದ ಸೀತಾ ಫಲ, ರಾಮ ಸೀತಾ ಫಲ, ಲಕ್ಷ್ಮಣ ಫಲ, ತೆಂಗಿನ ಕಾಯಿಯ ವಿವಿಧ ಜಾತಿಯನ್ನು ಅಲ್ಲಿ ಪ್ರದರ್ಶಿಸಿರುವುದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
- ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
- ಚಿತ್ರಗಳು: ವಿವೇಕ್ ಚಂದ್ರನ್