Kundapra.com ಕುಂದಾಪ್ರ ಡಾಟ್ ಕಾಂ

‘ಮಣಿಕೃಷ್ಣ ಸ್ವಾಮಿ ಅಕಾಡೆಮಿ’ ಗಾಯಕಿಯರ ‘ಮಂಜುನಾದ’ದ ಸ್ವರನಿನಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಎರಡನೇ ದಿನವಾದ ಗುರುವಾರ ‘ಡಾ.ವಿ.ಎಸ್.ಆಚಾರ್ಯ ಸಭಾಂಗಣ’ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆಯನ್ನು ಚಿತ್ರಿಸುವ ‘ಮಂಜುನಾದ’ ಗೀತಗಾಯನದಿಂದ ಕೇಳುಗರನ್ನು ತನ್ಮಯಗೊಳಿಸಿದವರು ಸುರತ್ಕಲ್‌ನ ‘ಮಣಿಕೃಷ್ಣ ಸ್ವಾಮಿ ಅಕಾಡೆಮಿ’ ಗಾಯಕಿಯರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಂಡ ‘ಮಂಜುನಾದ’ ಗೀತಕೃತಿಯನ್ನು ಆಧರಿಸಿ ಗಾಯಕಿಯರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಒಟ್ಟು ಏಳು ಕಲಾವಿದರ ತಂಡ ಏಳು ಹಾಡುಗಳನ್ನು ಪ್ರಸ್ತುತಪಡಿಸಿತು.

ಮೊದಲಿಗೆ ‘ಪ್ರಥಮದಲಿ ವಂದಿಸುವೆನು’ ಎಂದು ವಿಘ್ನವಿನಾಶಕ ಪ್ರಥಮ ಪೂಜಿತ ಗಣೇಶನನ್ನು ಪ್ರಾರ್ಥಿಸುವ ಮೂಲಕ ಗಾಯನವನ್ನು ಆರಂಭಿಸಲಾಯಿತು. ತದನಂತರದಲ್ಲಿ ರೇವತಿ ರಾಗದ ‘ಶ್ರೀ ಧರ್ಮಸ್ಥಳ ಕ್ಷೇತ್ರಾಧಿಪತಿ’, ತೋಡಿ ರಾಗದ ‘ಶ್ರೀ ಮಂಜುನಾಥ ಸ್ವಾಮಿನಮಃ’, ಪಟದೀಪ ರಾಗದ ‘ಎನಿತು ಜನುಮದ ಪುಣ್ಯ ಫಲವೋ’ ಎಂಬ ಗಾಯನವನ್ನು ಸಾದರ ಪಡಿಸಿದರು.

ಯಕ್ಷಗಾನದ ಪ್ರಸಂಗದಲ್ಲಿ ಹಾಡಲ್ಪಡುವ ದ್ವಿಜಾವಂತಿ ರಾಗ ಸಂಯೋಜನೆಯ ‘ಕಾಮಿನಿ ಕರೆದು ತಾರೆ’ ಎನ್ನುವ ಹಾಡು ವಿಶೇಷವಾಗಿತ್ತು. ಕೊನೆಯಲ್ಲಿ ಮಂಜುನಾಥ ಕಡತೋಕ ರಚಿತ ಹಾಡಿನ ಮೂಲಕ ಮಂಗಳ ಹಾಡಿದರು.

ವಯೋಲಿನ್ ನಲ್ಲಿ ಪೃಥ್ವಿ ಭಾಸ್ಕರ್ ಮತ್ತು ಮೃದಂಗದಲ್ಲಿ ಪ್ರಣವ್ ಸುಬ್ರಮಣ್ಯ ಅವರ ಸಹಕಾರ ಕರ್ಣಾನಂದಕವಾಗಿತ್ತು.

Exit mobile version