ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಹಾಗೂ ಶಾಲೆಯ ಆಗುಹೋಗುಗಳ ಬಗ್ಗೆ ಶಾಲೆಯ ಶಿಕ್ಷಕರೊಂದಿಗೆ ಚರ್ಚೆ ನಡೆಸುವುದರ ಜೊತೆಗೆ ತಮ್ಮಿಂದಾಗುವ ಸಹಕಾರ ಶಾಲೆಗೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ವಿದ್ಯಾಭ್ಯಾಸದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಶಾಲೆ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ ಕೆ.ಎಂ. ಹೇಳಿದರು.
ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸ್ಟೆಲ್ಲಾ ಮಾರಿಸ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ ಡಯಾನ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಡೋರಿನ್, ಸ್ಟೆಲ್ಲಾ ಮಾರೀಸ್ ಪ್ರಿ-ಪ್ರಿಪರೇಟರಿ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಜ್ಯೋತಿಪ್ರಿಯಾ ಉಪಸ್ಥಿತರಿದ್ದರು. ಶಾಲೆಯ ನಿವೃತ್ತ ಶಿಕ್ಷಕಿ ಫೆಲ್ಸಿಯಾನ ಡಿಸೋಜ ಧ್ವಜಾರೋಹಣಗೈದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಕ್ರೆಸೆನ್ಸ್ ಎ.ಸಿ. ಸ್ವಾಗತಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಜ್ವಲ್ ಮತ್ತು ಸಹಶಿಕ್ಷಕಿ ಪೂರ್ಣಿಮಾ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ಶಾಂತಿ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ರೇಷ್ಮಾ ಖಾರ್ವಿ ವಂದಿಸಿದರು.