Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಸಂಜೆಗೆ ರಂಗು ತಂದ ‘ದೊಡ್ಡಾಟದ ಹಾಡುಗಳು’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದರೆ:
ಅಲ್ಲಿ ಕುರುಕ್ಷೇತ್ರದ ಪ್ರಸಂಗ, ವಾಲಿ ಸುಗ್ರೀವರ ಕಾಳಗ, ಕಿತ್ತೂರಿನ ವೀರ ರಾಣಿ ಚೆನ್ನಮ್ಮ ತನ್ನ ಸೈನಿಕರಿಗೆ ಹುರಿದುಂಬಿಸುವ ಹಾಡು, ರೇಣುಕಾ ಮಹಾತ್ಮೆ ಹಾಗೂ ವೀರ ಅಭಿಮನ್ಯು ಮುಂತಾದ ಪ್ರಸಂಗವನ್ನು ದೊಡ್ಡಾಟದ ಹಾಡುಗಳ ಮೂಲಕ ತೋರಿಸುವ ಅದ್ಭುತ ಸನ್ನಿವೇಶಕ್ಕೆ ಆಳ್ವಾಸ್‌ನ ಕೃಷಿ ಸಿರಿ ವೇದಿಕೆ ಸಾಕ್ಷಿಯಾಗಿತ್ತು.

ಹೌದು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿ-೨೦೨೨ ಇದರ ಆಶ್ರಯದಲ್ಲಿ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೃಷಿ ಸಿರಿ ವೇದಿಕೆಯಲ್ಲಿ ಹಾವೇರಿಯ ಶಿಗ್ಗಾಂವ್‌ನ ಸವರಾಜ ಶಿಗ್ಗಾಂವ್ ಮತ್ತು ತಂಡದಿಂದ ‘ದೊಡ್ಡಾಟದ ಹಾಡುಗಳು’ ಎಂಬ ಕಾರ್ಯಕ್ರಮ ಮೂಡಿಬಂದಿತು.

ದೊಡ್ಡಾಟದ ಗಣೇಶನ ಸ್ತುತಿಯೊಂದಿಗೆ ದೊಡ್ಡಾಟದ ಹಾಡುಗಳ ಕಾರ್ಯಕ್ರಮವು ಪ್ರಾರಂಭವಾಯಿತು. ಅನಂತರದಲ್ಲಿ ಕುರುಕ್ಷೇತ್ರದ ದೊಡ್ಡಾಟದ ಪ್ರಸಂಗದ ಹಾಡು, ರೇಣುಕಾ ದೇವಿಯ ಭಕ್ಕಿಯಲ್ಲಿ ಸುಗಿಸುವ ನಯನ ಮನೋಹರ ಪದ, ವೀರ ಅಭಿಮನ್ಯು ಪ್ರಸಂಗದಲ್ಲಿ ಅಭಿಮನ್ಯು ಯುದ್ದಕ್ಕೆ ಹೊರಡುವ ಸಂದರ್ಭದಲ್ಲಿ ಆತನ ತಾಯಿ ಸುಭದ್ರೆ ಪೋಗಬೇಡವೋ ಬಾಲ ಎನ್ನುವ ಪದ, ರಾಮಾಯಣದಲ್ಲಿ ಬರುವ ವಾಲಿ – ಸುಗ್ರೀವರ ಕಾಳಗದ ತಾರಾನ ಪದ ಧನ್ಯವಾದೇನು, ಬ್ರಿಟಿಷರ ವಿರುದ್ದ ಹೋರಾಡಿದ ದಿಟ್ಟ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮ ತನ್ನ ಯೋಧರಿಗೆ ಯುದ್ಧದಲ್ಲಿ ಹುರುಪಿನಿಂದ ಪಾಲ್ಗೊಳ್ಳುವಂತೆ ಹೇಳುವ ಪ್ರಸಂಗದ ಮಣ್ಣಿನ ಮಕ್ಕಳೇ ಎನ್ನುವ ಪದ, ಬಾಹುಬಲಿ ಪ್ರಸಂಗದ ದಂತದಿ ಕೆತ್ತಿದ ಬೊಂಬೆ ಮುಂತಾದ ಪ್ರಸಂಗಗಳನ್ನು ತಮ್ಮ ಮಧುರ ಕಂಠದಿಂದ ನೆರೆದ ಪ್ರೇಕ್ಷಕರ ಮನಸೂರೆ ಗೆಲ್ಲುವಂತೆ ಹಾಡಿದರು.

ದೊಡ್ಡಾಟದ ಹಾಡುಗಳ ಕಥೆಗಾರರಾಗಿ ಬಸವರಾಜ್ ಶಿಗ್ಗಾಂವ್, ಮದ್ದಳೆಯಲ್ಲಿ ಚಂದ್ರಶೇಖರಯ್ಯ ಗುರವಯ್ಯನವರ್, ಹಾರ್ಮೋನಿಯಂನಲ್ಲಿ ಪಕ್ಕಿರೇಶ ಕೊಂಡಾಯಿ, ಶಹನಾಯಿ ವಾದಕರಾಗಿ ಮಲ್ಲೇಶ ಭಜಂಟ್ರಿ, ಹಿಮ್ಮೇಳದಲ್ಲಿ ಯಲ್ಲಪ್ಪ ಕರಟ್ಟಿ ಮತ್ತು ಶರೀಪ್ ಮಾಕಪ್ಪನವರ ಸಹಕಾರ ನೀಡಿದರು.

Exit mobile version