Kundapra.com ಕುಂದಾಪ್ರ ಡಾಟ್ ಕಾಂ

ಹೊಸ ಕೃತಿಗಳ ನಡುವೆ ಹಳೆಯ ಪುಸ್ತಕಗಳ ಮೇಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಅಲ್ಲಿ ಹಳೆಯ ಪುಸ್ತಕಗಳಿದ್ದವು. ಹೊಸ ಕೃತಿಗಳ ಸಂಗ್ರಹವೂ ಇತ್ತು. ಕೃತಿಗಳತ್ತ ಕಣ್ಣು ಹಾಯಿಸಿ ಸಾಗುವವರು, ಹಾಗೆ ಸಾಗುತ್ತಲೇ ಇಷ್ಟವಾದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೂ ಇದ್ದರು. ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವಯೋವೃದ್ಧರು ಪುಸ್ತಕ ಪ್ರೀತಿಯೊಂದಿಗೆ ಅಲ್ಲಿದ್ದರು. ಸಾಹಿತ್ಯ, ಧರ್ಮ ಆಧ್ಯಾತ್ಮ, ಸಂಸ್ಕೃತಿ ಸೇರಿದಂತೆ ವಿವಿಧ ಬಗೆಯ ಕೃತಿಗಳ ರಾಶಿ ಎದ್ದುಕಾಣುತ್ತಿತ್ತು.

ಮೂಡುಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಪ್ರಯುಕ್ತ ಆಯೋಜಿತವಾದ ಪುಸ್ತಕ ಮೇಳದ ವಿಶೇಷ ಚಿತ್ರಣವಿದು. ಇಲ್ಲಿ 10ಕ್ಕೂ ಹೆಚ್ಚು ಪುಸ್ತಕದ ಸ್ಟಾಲ್‌ಗಳಿದ್ದು ಪುಸ್ತಕ ಓದುಗರನ್ನು ಸೆಳೆಯುತ್ತಿವೆ.

ಹಳೆಯ ಪುಸ್ತಕಗಳನ್ನು ನೋಡುವ ಕುತೂಹಲದೊಂದಿಗೆ ಹಲವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮಿಷ್ಟದ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪುಸ್ತಕಗಳು ಬಂದಿದ್ದರೆ ಖರೀದಿಸುವ ಇರಾದೆಯೊಂದಿಗೆ ಭಾಗವಹಿಸುವವರೂ ಇದ್ದಾರೆ. ಧರ್ಮ-ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳ ಸ್ಟಾಲ್‌ಗಳಲ್ಲಿ ಹಿರಿಯರು ಕಾಣಿಸಿಕೊಂಡರೆ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಿರುವ ಸ್ಟಾಲ್‌ಗಳ ಕಡೆಗೆ ಎಲ್ಲಾ ವಯೋಮಾನದವರು ಧಾವಿಸುತ್ತಿದ್ದಾರೆ.

ಸಪ್ನಾ ಬುಕ್ ಹೌಸ್, ನವಕರ್ನಾಟಕ ಸೇರಿದಂತೆ ಕರ್ನಾಟಕದ ವಿವಿಧ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳ ಮಳಿಗೆಗಳು ಇಲ್ಲಿವೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಕಟಿಸಿದ ಪುಸ್ತಕಗಳೂ ಇಲ್ಲಿ ಲಭ್ಯವಿವೆ. ಆಳ್ವಾಸ್ ನುಡಿಸಿರಿ, ವಿರಾಸತ್ ಸಾಂಸ್ಕೃತಿಕ ವೇದಿಕೆಗಳ ಮೂಲಕ ವ್ಯಕ್ತವಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ತಜ್ಞರ ವಿಚಾರಗಳನ್ನೊಳಗೊಂಡ ವಿಶೇಷ ಸಂಪುಟಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿವೆ. ’ನುಡಿಸಿರಿ’ ಸಮ್ಮೇಳನದ ಸಂದರ್ಭದಲ್ಲಿ ಹೊರತರಲಾದ ಎಲ್ಲಾ ವಾರ್ಷಿಕ ಸಂಚಿಕೆಗಳು ಒಂದೆಡೆ ಸಿಗುತ್ತಿವೆ. ಸಿರಿಗನ್ನಡ, ಕರಾವಳಿ ಕರ್ನಾಟಕ ಸಂಪುಟದ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ದಕ್ಷಿಣ ಕನ್ನಡದ ಸಾಹಿತ್ಯದ ವಿಶೇಷತೆಯನ್ನು ಪರಿಚಯಿಸುವ ಹಲವು ಕೃತಿಗಳು ಇಲ್ಲಿ ಖರೀದಿಗೆ ಲಭ್ಯವಿವೆ. ಹಳೆಯ ಪುಸ್ತಕಗಳನ್ನು ಮುಖಬೆಲೆಗಿಂತ ಅರ್ಧದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಾಗಿ ಮೆಡಿಕಲ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆಗಳಿಗೆ ಅನೂಕೂಲಕರವಾಗುವಂತಹ ಪುಸ್ತಕಗಳನ್ನು ಮಂಡಿಪೇಟೆ, ದಾವಣಗೆರೆಯ ಮಳಿಗೆಗಳಲ್ಲಿ ಕಾಣಬಹುದು.

ಲಲಿತಕಲಾ ಅಕಾಡೆಮಿ ಹೊರತಂದ ಕಲಾತ್ಮಕ ವಲಯಕ್ಕೆ ಸಂಬಂಧಿಸಿದ ಪುಸ್ತಕಗಳೂ ನೋಡುಗರಿಗೆ ವಿಶೆಷವೆನಿಸಿ ಕೊಂಡುಕೊಳ್ಳುತಿದ್ದಾರೆ. ಕೇರಳ ಮೂಲದ ಗೋಪಿನಾಥ್ ಲಲಿತಕಲೆಗೆ ಸಂಬಂಧಿಸಿದ ವಿನೂತನ ಕೃತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವು ಮಳಿಗೆಯಲ್ಲಿ ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಸಹಕಾರಿಯಾಗುವಂತಹ ಹಲವಾರು ಪುಸ್ತಕಗಳಿವೆ. ಮಕ್ಕಳ ಆಸಕ್ತಿಗೆ ತಕ್ಕಂತೆ ಕಾರ್ಟೂನ್ ಪುಸ್ತಕಗಳು, ಕಥೆ ಕಾದಂಬರಿಗಳು, ಲೇಖಕರಾದ, ಕುವೆಂಪು, ತೇಜಸ್ವಿ, ಎನ್ ಗಣೇಶಯ್ಯ ಸೇರಿದಂತೆ ಅನೇಕ ಜನಪ್ರಿಯ ಪುಸ್ತಕಗಳೂ ಮಾರಟಕ್ಕಿವೆ.

Exit mobile version