Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿಯಲ್ಲಿ ತೆರೆದುಕೊಂಡ ಜಾದೂಗಾರರ ಮಾಯಾಲೋಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಅಲ್ಲಿ ದ್ರೌಪದಿಗೆ ಕೃಷ್ಣ ವಸ್ತ್ರ ನೀಡಿದಂತೆ ಮುಗಿಯದಷ್ಟು ವಸ್ತ್ರವನ್ನು ಖಾಲೀ ಡಬ್ಬಿಯಿಂದ ಹೊರತೆಗೆಯುತ್ತಿದ್ದರು. ಬಿಳಿಯ ಬಣ್ಣದ ರಿಂಗ್ ಹಸಿರಾಗಿತ್ತು. ಹಸಿರು ರಿಂಗ್ ಮತ್ತೆ ಬಿಳಿಯಾಯ್ತು. ನೋಡನೋಡುತ್ತಿದ್ದಂತೆ ರಿಂಗ್ ಮಾಯವಾಗಿ ಗಾಳಿಯಲ್ಲಿ ತೇಲುವ ಮಂತ್ರದಂಡವಾಯ್ತು.

ಇಂತಹದ್ದೊಂದು ಮಾಯಾಲೋಕ ಸೃಷ್ಟಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಮೇಳದ ?ಜಾಂಬೂರಿ ಜಾದು? ಎನ್ನುವ ವಿಶೇಷ ಕಾರ್ಯಕ್ರಮ.

ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಗಣೇಶ್ ಕುದ್ರೋಳಿ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ತನಕ 18 ಜಾದೂಗಾರರಿಂದ 6 ವೇದಿಕೆಗಳಲ್ಲಿ ನಡೆಯುತ್ತಿರುವ ಮ್ಯಾಜಿಕ್ ಶೋ ಜಾಂಬೂರಿಯ ಮೆರುಗನ್ನು ಹೆಚ್ಚಿಸಿದೆ.

ಕಳೆದ ಎರಡು ದಿನಗಳಿಂದ ಕುದ್ರೋಳಿ ಗಣೇಶ್, ತಮಿಳುನಾಡಿನ ಮೆಜಿಷಿಯನ್ ಮಹಾ, ಪ್ರಹ್ಲಾದಾಚಾರ್ಯ, ಕೇರಳದ ಸಚಿನ್ ತಮ್ಮ ಜಾದೂ ಕೌಶಲ್ಯದಿಂದ ಜನಮನ ರಂಜಿಸಿದ್ದಾರೆ. ನವದೆಹಲಿಯ ರಾಜ್‌ಕುಮಾರ್, ಕೇರಳದ ಎಂ.ಪಿ. ಹಾಶಿಮ್, ಬೆಂಗಳೂರಿನ ವೇಣುಗೋಪಾಲ್, ಕೇಶವ್ ಸೇರಿದಂತೆ ಭಾರತದ ಮೂಲೆ ಮೂಲೆಗಳಿಂದ ಆಗಮಿಸಿರುವ ಪ್ರಖ್ಯಾತ ಜಾದುಗಾರರು ಏಕಕಾಲದಲ್ಲಿ ದಿನಕ್ಕೆ ಮೂರು ಪ್ರದರ್ಶನದಂತೆ ಜಾದುವಿನ ಬೇರೆ ಬೇರೆ ಕಲಾಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ.

‘ಮಾಯದ ಕತ್ತರಿ’ ಎಂಬ ಹಾಡಿನೊಂದಿಗೆ ಹಗ್ಗವೊಂದನ್ನು ಕ್ಷಣಾರ್ಧದಲ್ಲಿ ತುಂಡರಿಸಿ ಮತ್ತೆ ಜೋಡಿಸಿ ಕೈ ಕರಾಮತ್ತಿನಿಂದ ಗಣೇಶ್ ಕುದ್ರೋಳಿ ಮಾಯಾಲೋಕ ಸೃಷ್ಟಿಸಿದರು. ಪೋಲ್ ಸ್ಪೆಷಲ್ ಹೆಸರಿನ ಮ್ಯಾಜಿಕ್ ನಲ್ಲಿ ಮ್ಯಾಜಿಕ್ ಬಾಕ್ಸ್‌ನ ಮೇಲೆ ನಿಂತಿದ್ದ ಯುವತಿ ಬಾಕ್ಸ್ ತೆಗೆದರೂ ಕದಲದೇ ಗಾಳಿಯಲ್ಲಿ ನಿಂತಿದ್ದು ನೆರೆದವರ ಹುಬ್ಬೇರಿಸಿತು. ಕ್ಷಣಾರ್ಧದಲ್ಲಿ ಶೂನ್ಯದಿಂದ ಚೆಂಡುಗಳನ್ನು ಸೃಷ್ಟಿಸಿ, ದ್ವಿಗುಣಗೊಳಿಸಿದ ಬಗೆ ವಿಸ್ಮಯಕಾರಿಯಾಗಿತ್ತು.

ತಮಿಳುನಾಡಿನ ಮ್ಯಾನಿಪುಲೇಟಿವ್ ಮ್ಯಾಜಿಕ್ ಸ್ಪೆಷಲಿಸ್ಟ್ ಮೆಜಿಶಿಯನ್ ಮಹಾ ಮಂತ್ರದಂಡದಿಂದ ಕರವಸ್ತ್ರ , ಕರವಸ್ತ್ರದಿಂದ ಹೂಗುಚ್ಛ, ಬೆಂಕಿಯಿಂದ ರಿಬ್ಬನ್, ಝಳಪಿಸುವ ಚಾಕುವಿನಿಂದ ಬಲೂನು ಒಡೆದು ಪಾರಿವಾಳ ಹೊರತೆಗೆದು ವಿದ್ಯಾರ್ಥಿಗಳನ್ನು ಮೂಕವಿಸ್ಮಿತರನ್ನಾಗಿಸಿದರು.

ಜಾದುವಿನ ರೋಚಕ ತಿರುವುಗಳ ನಡುವೆ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಕರತಾಡನ ಮಾಡುವ ಮೂಲಕ ಜಾದುಗಾರರಿಗೆ ಉತ್ಸಾಹ ತುಂಬಿದರೆ, ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ವಿಶೇ? ಟೋಪಿಯ ಮ್ಯಾಜಿಕ್ ನಿಂದ ಚಾಕೊಲೇಟ್ ಸೃಷ್ಟಿಸಿ ವಿದ್ಯಾರ್ಥಿಗಳಿಗೆ ನೀಡಿದ್ದು ನೆರೆದವರನ್ನು ರಂಜಿಸಿತು.

Exit mobile version