Kundapra.com ಕುಂದಾಪ್ರ ಡಾಟ್ ಕಾಂ

ದೇವಾವತಾರಗಳ ದರ್ಶನ ಸಾಧ್ಯವಾಗಿಸಿದ ‘ನಾಟ್ಯ ವೈವಿಧ್ಯ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಇಲ್ಲಿನ ನುಡಿಸಿರಿ ವೇದಿಕೆಯಲ್ಲಿ ವಿದುಷಿ ಸುಪರ್ಣ ವೆಂಕಟೇಶ್ ತಂಡದ ಕಲಾವಿದರ ’ನಾಟ್ಯ ವೈವಿಧ್ಯ’ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿತು.

ಶುಭಾಶಯ ನಿವೇದನಾ ಪ್ರಾರ್ಥನೆಯ ’ಪುಷ್ಟಮಂಜರಿ’ ನೃತ್ಯದ ಮೂಲಕ ಕಲಾವಿದರು ಅಷ್ಟದಿಕ್ಪಾಲಕರನ್ನು ಪೂಜಿಸುವ ಆರಾಧನಾ ಭಂಗಿಗಳನ್ನು ಪ್ರದರ್ಶಿಸಿದರು. ಜರ್ಜರದೊಂದಿಗೆ ಪ್ರದರ್ಶಿತವಾದ ನೃತ್ಯವು ದೈವೀಪ್ರಾರ್ಥನೆಯ ಸಂಕಲ್ಪ ಮತ್ತು ಶ್ರದ್ಧಾಪೂರ್ವಕ ಸಮರ್ಪಣಾ ಭಾವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಯಿತು.

‘ದುರ್ಗಾ ಕೌತ್ವಂ’ ನೃತ್ಯವು ಮಹಿಮಾನ್ವಿತ ದುರ್ಗೆಯ ಶಕ್ತಿ ಮತ್ತು ರೌದ್ರಾವತಾರವನ್ನು ಅನಾವರಣಗೊಳಿಸಿತು. ರಾಕ್ಷಸ ಸಂಹಾರಕ್ಕೂ ಮುನ್ನ ನಡೆಯುವ ಸಂಘರ್ಷದ ವೇಳೆ ದೇವಿ ತಾಳುವ ರೌದ್ರಾವತಾರದ ವಿರಾಟ್ ರೂಪ ಕಲಾವಿದರ ನಾಟ್ಯಕೌಶಲ್ಯದ ಮೂಲಕ ಮನವರಿಕೆಯಾಯಿತು.

ವಿಷ್ಣುವಿನ ದಶಾವತಾರದ ಪರಿಕಲ್ಪನೆ ಆಧಾರಿತ ನೃತ್ಯರೂಪಕವು ಪ್ರೇಕ್ಷಕರನ್ನು ಪ್ರಭಾವಿಸಿತು. ವಿಷ್ಣುವಿನ ಒಂದೊಂದು ರೂಪವನ್ನು ಕಾಣಿಸುವಲ್ಲಿ ಕಲಾವಿದರು ಯಶಸ್ವಿಯಾದರು. ನಂತರ ಭರತನಾಟ್ಯದ ತಿಲ್ಲಾನ ನೃತ್ಯವು ಕಾರ‍್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು.

ಬೆಂಗಳೂರಿನ ಸಾಯಿ ಡ್ಯಾನ್ಸ್ ಇಂಟರ್ ನ್ಯಾಷನಲ್ ನೃತ್ಯ ಕಲಾವಿದರಾದ ಆದಿತಿ ವಿ ರಾವ್, ಮಾನ್ಯ ವಿಕ್ರಮ್, ನೇಹಾ, ದಿವ್ಯಶ್ರೀ, ಮಾನ್ಯ ರಾಜೇಶ್, ಪಲ್ಲವಿ, ಅನನ್ಯ, ದರ್ಶನ್ ಕೆ.ಟಿ, ಸಮರ್ಥ್ ಅವರ ನೃತ್ಯಶೈಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Exit mobile version