Kundapra.com ಕುಂದಾಪ್ರ ಡಾಟ್ ಕಾಂ

ಸಮಾಜಪರ ಚಿಂತನೆ ಬಿಂಬಿಸಿದ ‘ಹಾಸ್ಯ ರಸಧಾರೆ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ದ್ವಂದ್ವಾರ್ಥಗಳಿಲ್ಲದೆಯೂ ಹಾಸ್ಯವನ್ನು ಧ್ವನಿಸಬಹುದು. ಸದಭಿರುಚಿಯ ಹಾಸ್ಯವು ಸಾಮಾಜಿಕ ನ್ಯೂನತೆಗಳನ್ನು ಮೀರಿ ಬದಲಾಗುವ ಸಾಮೂಹಿಕ ಮನಸ್ಥಿತಿಯನ್ನು ಸೃಷ್ಟಿಸುತ್ತದೆ ಎಂಬುದನ್ನು ಖ್ಯಾತ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಅವರ ’ನಗೆಹಬ್ಬ’ ತಂಡವು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ’ನುಡಿಸಿರಿ’ ವೇದಿಕೆಯಲ್ಲಿ ಶುಕ್ರವಾರ ನಡೆಸಿಕೊಟ್ಟ ಮೂಲಕ ನಿರೂಪಿಸಿತು.

ನಗೆಹಬ್ಬ ತಂಡದ ರಿಚರ್ಡ್ ಲೂಯಿಸ್, ಮಿಮಿಕ್ರಿ ದಯಾನಂದ್ ಮತ್ತು ಕಿರ್ಲೋಸ್ಕರ್ ಸತ್ಯ ಅವರು ನಗೆಯ ಅಲೆಯನ್ನು ಸೃಷ್ಟಿಸಿದ್ದಲ್ಲದೇ ಬದುಕಿನ ಅನೇಕ ಮೌಲಿಕ ಅಂಶಗಳನ್ನು ಮನದಟ್ಟು ಮಾಡಿಕೊಟ್ಟರು. ಭಾಷೆಯೇ ಸಕಲ ಕಾರ್ಯಕ್ಕೂ ಮೂಲ ಸಾಧನ. ಭಾಷಾಶುದ್ಧಿ ಕುರಿತಾದ ಪರಿಕಲ್ಪನೆ ಇಲ್ಲವಾದಲ್ಲಿ ಜನರನ್ನು ತಲುಪುವುದು ಕಷ್ಟ. ಜೊತೆಗೆ ಭಾಷಾಭಿಮಾನ ಮತ್ತು ಭಾಷೆಯನ್ನು ಬಳಸಿ, ಬೆಳೆಸುವದೇ ನಿಜವಾದ ಶ್ರೀಮಂತಿಕೆ ಎನ್ನುವ ಅಮೂಲ್ಯ ಸಂದೇಶವನ್ನು ನಗೆಚಟಾಕಿಯ ಮುಖಾಂತರ ರಿಚರ್ಡ್ ಲೂಯಿಸ್ ಸಾರಿದರು.

ಮಿಮಿಕ್ರಿ ದಯಾನಂದ್ ಅವರು ವಿವಿಧ ವ್ಯಕ್ತಿತ್ವಗಳ ಮಿಮಿಕ್ರಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪ್ರಧಾನಿ ನರೇಂದ್ರ ಮೋದಿ, ಡಾ.ರಾಜಕುಮಾರ್, ಶಂಕರನಾಗ್, ಟೈಗರ್ ಪ್ರಭಾಕರ್ ಬಾಲಕೃಷ್ಣ, ಮುಖ್ಯಮಂತ್ರಿ ಚಂದ್ರು ಇನ್ನಿತರ ಪ್ರಸಿದ್ಧ ವ್ಯಕ್ತಿಗಳ ಧ್ವನಿಶೈಲಿಯನ್ನು ನೆನಪಿಸುವಂತೆ ಅನುಕರಿಸಿ ರಂಜಿಸಿದರು.

ಹಾಸ್ಯದ ಮಾತುಗಳನ್ನಾಡುವುದರ ಜೊತೆಗೆ ಮಿಮಿಕ್ರಿ ದಯಾನಂದ್ ಭಾಷೆಯ ಕುರಿತು ಪ್ರತಿಯೊಬ್ಬ ಕನ್ನಡಿಗರೂ ತೋರುವ ಕಾಳಜಿ ಹೇಗಿರಬೇಕು ಎನ್ನುವುದನ್ನು ತಿಳಿಸಿಕೊಟ್ಟರು. ಪ್ರಸ್ತುತ ಭಾಷೆಯ ಸಮಸ್ಯೆ, ಗಡಿ ವಿವಾದ, ಕೊರೋನಾ ಸಾಂಕ್ರಾಮಿಕ ರೋಗ ಸಂಬಂಧಿಸಿದ ಸಂಗತಿಗಳನ್ನು ಪ್ರಸ್ತಾಪಿಸಿ ಚಿಂತನೆಯ ನಿಲುವುಗಳನ್ನು ವ್ಯಕ್ತಪಡಿಸಿದರು.

ಇವರ ಜೊತೆಗೆ ಹಾಸ್ಯದ ಚಂದವನ್ನು ಹೆಚ್ಚಿಸುವಲ್ಲಿ ಮ್ಮೂಸಿಕ್‌ನ ಪಾತ್ರವೂ ಪ್ರಮುಖವಾಗಿತ್ತು. ಹಾಸ್ಯಭರಿತ ಸಾಹಿತ್ಯ ರಚನೆಯ ಹಾಡುಗಳನ್ನು ’ಭಾಗ್ಯದ ಲಕ್ಮೀ ಬಾರಮ್ಮ’ ಖ್ಯಾತಿಯ ಕಿರ್ಲೋಸ್ಕರ್ ಸತ್ಯ ಸಾದರಪಡಿಸಿದರು. ಕೀಬೋರ್ಡ್‌ನಲ್ಲಿ ಮಂಜು ಮತ್ತು ರಿದಮ್ ಪ್ಯಾಡ್‌ನಲ್ಲಿ ಬಾಬು ಸಾಥ್ ನೀಡಿದರು.

Exit mobile version