Kundapra.com ಕುಂದಾಪ್ರ ಡಾಟ್ ಕಾಂ

ತುಳು ಹಾಸ್ಯ ಲಹರಿಯ ಮೌಲಿಕ ಸಂವಹನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಆಳ್ವಾಸ್‌ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯು ಕರಾವಳಿ ಸಾಂಸ್ಕೃತಿಕ ಸೊಗಡಿನ ಸ್ಪರ್ಶದೊಂದಿಗಿನ ತುಳು ಹಾಸ್ಯ ಲಹರಿಗೆ ಸಾಕ್ಷಿಯಾಯಿತು. ದೇಶದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ಭಿನ್ನತೆಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ತುಳುನಾಡಿನ ವೈಶಿಷ್ಟ್ಯತೆಯನ್ನೂ ಕಾಣಿಸುವಲ್ಲಿ ಯಶಸ್ವಿಯಾಯಿತು.

ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆ, ಗ್ರಾಮೀಣ ಪ್ರದೇಶದ ಕೊಡುಗೆಯ ಮಹತ್ವ, ಗ್ರಾಮೀಣ ಪರಂಪರೆಯ ವೈಶಿಷ್ಟ್ಯತೆಯನ್ನು ಈ ಹಾಸ್ಯ ಕಾರ್ಯಕ್ರಮ ಚಿತ್ರಿಸಿತು. ಜೊತೆಗೆ ಮೌಲಿಕ ಬದುಕಿನ ಕುರಿತ ಸಂದೇಶವನ್ನೂ ಅಭಿವ್ಯಕ್ತಿಸಿತು. ಕೇವಲ ಜ್ಯೋತಿಷ್ಯವನ್ನು ಮಾತ್ರ ನಂಬಿ ಕೂತರೆ ಸಾಲದು. ಜೊತೆಗೆ ಸ್ವ-ಪ್ರಯತ್ನವೂ ಬೇಕು ಎಂಬ ಉತ್ತಮ ಸಂದೇಶವನ್ನೊಳಗೊಂಡ ಹಾಸ್ಯವು ನೆರೆದಿದ್ದ ಜನರನ್ನು ನಗೆಕಡಲಲ್ಲಿ ತೇಲುವಂತೆ ಮಾಡಿತು. ರಂಗ್‌ದ ರಾಜೆ ಎಂದೇ ಪ್ರಸಿದ್ದರಾದ ಸುಂದರ್ ರೈ ಮಂದಾರ, ಕುಸಲ್ದ ಮುತ್ತು, ಅರುಣ್ ಚಂದ್ರ ಬಿ.ಸಿ.ರೋಡು ಮತ್ತು ತಂಡ ಹಾಗೂ ಕುಡ್ಲ ಕುಸಲ್ ತಂಡದ ಕಲಾವಿದರು ‘ತುಳು ಹಾಸ್ಯ ಲಹರಿ’ ಕಾರ್ಯಕ್ರಮವನ್ನು ವಿನೂತನವಾಗಿ ನಡೆಸಿಕೊಟ್ಟರು.

ಮೊದಲ ಹಾಸ್ಯ ಪ್ರಸಂಗದಲ್ಲಿ ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿ ದನ ತೆಗೆದುಕೊಳ್ಳಲು ಬ್ಯಾಂಕ್‌ನಿಂದ ಸಾಲ ತೆಗೆದು, ನಂತರ ದನ ಕಳೆದುಕೊಂಡು ಬ್ಯಾಂಕ್ ಮ್ಯಾನೇಜರ್‌ನಿಂದ ಆತ ಪರಿತಪಿಸುವ ಪಾಡನ್ನು ಕಾಣಿಸಿತು. ಈ ಪಾಡಿನ ಚಿತ್ರಣದಲ್ಲಿಯೇ ಹಾಸ್ಯವಿತ್ತು. ಇದರ ಜೊತೆಗೆ ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆಯನ್ನೂ ಪ್ರಚುರಪಡಿಸಿತು.

ಮತ್ತೊಂದು ಹಾಸ್ಯ ಪ್ರಸಂಗವು ಇನ್ನೊಬ್ಬರ ಸಂಪತ್ತನ್ನು ಪಡೆದುಕೊಳ್ಳುವ ದುರಾಸೆ ಇರಬಾರದು ಎಂಬುದನ್ನು ಮನಗಾಣಿಸಿತು. ಒಬ್ಬಾಕೆ ಒಂದು ಚಿನ್ನದ ಉಂಗುರ ಕಳೆದುಕೊಂಡಾಗ ನೆರವಿಗೆ ಧಾವಿಸುವ ಬದಲು ಸ್ನೇಹಿತರೇ ದುರಾಸೆಪಟ್ಟಾಗ ಆಗುವ ಪರಿಣಾಮವನ್ನು ಚಿತ್ರಿಸಿತು. ಹಾಸ್ಯದ ಆಯಾಮದೊಂದಿಗೆ ನಗಿಸುತ್ತಲೇ ಪರರ ಸೊತ್ತಿಗೆ ಎಂದಿಗೂ ಆಸೆ ಪಡಬಾರದು ಎಂಬ ಮೌಲ್ಯವನ್ನು ದಾಟಿಸಿತು.

ಒಬ್ಬ ಕ್ರಿಕೆಟ್ ಆಟಗಾರ ಮತ್ತು ಅಂಪೈರ್‌ನ ಪ್ರವೇಶದೊಂದಿಗೆ ಆರಂಭಗೊಂಡ ಇನ್ನೊಂದು ಹಾಸ್ಯ ಪ್ರಸಂಗವು ಆಧುನಿಕ ಆಟಗಳಿಂದ ದೇಸೀ ಆಟಗಳ ಸೊಗಡು ಹೇಗೆ ವಿಶಿಷ್ಠ ಎಂಬುದನ್ನು ನಿರೂಪಿಸಿತು. ಹಳ್ಳಿ ಆಟಗಳನ್ನು ದೂಷಿಸಿ ಉಡಾಫೆಯೊಂದಿಗೆ ಮಾತನಾಡುವ ನಗರದ ವ್ಯಕ್ತಿಯೊಂದಿಗಿನ ಸಂಭಾಷಣೆಯನ್ನು ರಸವತ್ತಾಗಿ ಪ್ರಸ್ತುತಪಡಿಸಿ ಹಳ್ಳಿಗಾಡಿನ ಆಟಗಳ ಪ್ರಾಮುಖ್ಯತೆಯನ್ನು ಬಿಂಬಿಸಿತು. ಜ್ಯೋತಿಷ್ಯದ ಕುರಿತ ಪ್ರಸಂಗವಂತೂ ನಂಬಿಕೆ ಮತ್ತು ಮೌಢ್ಯದ ನಡುವಿನ ವ್ಯತ್ಯಾಸಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು. ದೊಡ್ಡ ಸಾಧನೆಯ ಕನಸು ಕಂಡು ಜ್ಯೋತಿಷ್ಯವನ್ನಷ್ಟೇ ನಂಬುವ ಬದಲು ಸತತ ಪರಿಶ್ರಮದೊಂದಿಗೆ ತೊಡಗಿಕೊಂಡರೆ ವಿನೂತನ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿಕೊಟ್ಟಿತು.

ಸುಂದರ್ ರೈ ಮಂದಾರ, ಕುಸಲ್ದ ಮುತ್ತು ಅರುಣ್ ಚಂದ್ರ ಬಿ.ಸಿ.ರೋಡ್ ಅವರ ತಂಡದಲ್ಲಿ ವಿನಾಯಕ ಜೆಪ್ಪು, ರಂಜನ್ ಬೋಳೂರು, ಪ್ರಜ್ವಲ್ ಅತ್ತಾವರ, ಸುರೇಶ್ ಸರಪಾಡಿ ಮತ್ತು ಕುಡ್ಲ ಕುಸಲ್ ತಂಡದಲ್ಲಿ ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ಅಶೋಕ್ ಬೇಕೂರು, ಝೀ ಕನ್ನಡ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪಿಂಕಿ ರಾಣಿ ತಮ್ಮ ಹಾಸ್ಯ ನಟನೆಯ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು. ರವಿ ಆಚಾರ್ಯ ಹಿನ್ನೆಲೆ ಸಂಗೀತ ನೀಡಿದರು.

Exit mobile version