Kundapra.com ಕುಂದಾಪ್ರ ಡಾಟ್ ಕಾಂ

ಹೊಸ ವಾದ್ಯಗಳೊಂದಿಗೆ ಯಕ್ಷಗಾನದ ವಿನೂತನ ಪ್ರಯೋಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಯಕ್ಷಗಾನ ಹಿಮ್ಮೇಳವೆಂಬುದು ಕೇವಲ ಚಂಡೆ, ಮೃದಂಗ ಭಾಗವತರ ನಟ್ವಾಂಗ ಮತ್ತು ಜಾಗಟೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ‘ಕೃಷಿಸಿರಿ ವೇದಿಕೆ’ಯಲ್ಲಿ ಶುಕ್ರವಾರ ನಡೆದ ‘ಯಕ್ಷಗಾನ ರಸಮಂಜರಿ’ ಕಾರ್ಯಕ್ರಮ ನಿರೂಪಿಸಿತು.

ಸಾಂಪ್ರದಾಯಿಕ ಯಕ್ಷಗಾನಕ್ಕೆ ಆದ್ಯತೆ ನೀಡುವುದರೊಂದಿಗೆ ನವಮಾದರಿಯಲ್ಲಿ ವೈವಿಧ್ಯಮಯವಾಗಿ ಯಕ್ಷಗಾನದ ಪದಗಳನ್ನು ಪ್ರಸ್ತುತಪಡಿಸಲಾಯಿತು. ಮೊದಲಿಗೆ ಚಂಡೆ ಮತ್ತು ತಬಲದ ಜುಗಲ್ಬಂದಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಸಭಾಂಗಣದಲ್ಲಿ ನೆರೆದಿರುವ ಯಕ್ಷಗಾನ ಪ್ರಿಯರಿಗೆ ಮುದ ನೀಡಿತು. ಅಲ್ಲದೇ ಸಾಂಪ್ರದಾಯಿಕ ಶೈಲಿ ಮತ್ತು ನವೀನ ಶೈಲಿಯ ಸಮ್ಮಿಶ್ರಣ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಭಾಗವತರ ಕಂಠದಲ್ಲಿ ಸೊಗಸಾಗಿ ಮೂಡಿಬಂದ ರಾಮ ರಾಮ ಶ್ರೀ ರಾಮ'ಬಂದನು ದೇವರ ದೇವ’ ಇನ್ನಿತರ ಪದ್ಯಗಳು ಪ್ರೇಕ್ಷಕರನ್ನ ರೋಮಾಂಚನಗೊಳಿಸಿತು. ಯಕ್ಷಗಾನದ ಮೂಲ ವಾದ್ಯಗಳಾದ ಚಂಡೆ, ಮೃದಂಗ, ವನ್ನು ಬಳಸುವುದರ ಜೊತೆಗೆ ವಿನೂತನವಾಗಿ ವಯೊಲಿನ್, ಗಿಟಾರ್, ಕೊಳಲು, ನುಡಿಸಿ ಯಕ್ಷಗಾನಕ್ಕೆ ವಿಶೇಷ ಮೆರಗು ನೀಡಿದರು.

ದೇವಾನಂದ ಭಟ್ ನೇತೃತ್ವದ ಆರು ಭಾಗವತರ ಮತ್ತು ಐದು ಹಿಮ್ಮೇಳದವರ ವಿಶೇಷ ಸಂಗಮ ಯಕ್ಷಪ್ರಿಯರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಂತಿತ್ತು. ವಯೋಲಿನ್‌ನಲ್ಲಿ ಶ್ರೀಧರ್ ಆಚಾರ್ ಗಿಟಾರ್‌ನಲ್ಲಿ ಶರತ್ ಕೊಳಲಿನಲ್ಲಿ ಯೋಗೇಶ್ ಅವರ ಸಾಥ್ ಕರ್ಣಾಂನಂದವಾಗಿತ್ತು.

ವರದಿ: ಕಾರ್ತಿಕ ಹೆಗಡೆ, ದ್ವಿತೀಯ ವರ್ಷ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಎಸ್.ಡಿ.ಎಂ, ಸ್ನಾತಕೋತ್ತರ ಕೇಂದ್ರ ಉಜಿರೆ.

Exit mobile version