Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿ ಕಲಾಮೇಳದಲ್ಲಿ ಉಚಿತ ಕರಕುಶಲ ತರಬೇತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಆಸಕ್ತಿಯಿದ್ದರೆ ಯಾವುದೂ ಕಷ್ಟವಲ್ಲ. ಯಾರ ಮಾರ್ಗದರ್ಶನವೂ ಇಲ್ಲದೇ, ಸ್ವತಃ ತಾವೇ ಕರಕುಶಲ ಕಲೆಯನ್ನು ಕಲಿತು, ಅದನ್ನೇ ಉದ್ಯಮವನ್ನಾಗಿ ನಡೆಸಿಕೊಂಡು ಬರುತ್ತಿರುವ ಜೊತೆಗೆ ತಮಗೆ ತಿಳಿದ ವಿದ್ಯೆಯನ್ನು ಆಸಕ್ತರಿಗೂ ಕಲಿಸುವ ಮೂಲಕ ಔದಾರ್ಯ ಮೆರೆಯುತ್ತಲೇ ಬಂದಿದ್ದಾರೆ ಈ ಕಲಾವಿದ.

ತಮ್ಮ ವಿಶೇಷ ಪ್ರತಿಭೆಯ ಮೂಲಕ ತಮ್ಮನ್ನು ಗುರುತಿಸಿಕೊಂಡ ದವಲಪ್ಪ ಟಿ. ಸಾತಪುತೆ ಅವರು ಕಸದಿಂದ ರಸ ಪರಿಕಲ್ಪನೆಯಲ್ಲಿ ತಮ್ಮ ಹೊಲದಲ್ಲಿ ಸಿಗುವ ಜೊಂಡು ಹುಲ್ಲುಗಳು, ಜೋಳದ ಒಣ ಸಿಪ್ಪೆಗಳು ಮತ್ತು ಚರ್ಮಗಳನ್ನು ಬಳಸಿಕೊಂಡು ಕ್ರಿಯಾತ್ಮಕವಾಗಿ ಉತ್ಪನ್ನಗಳನ್ನು ತಯಾರಿಸುತ್ತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಕಲೆಯ ಪರಿಚಯ ಮಾಡಿಕೊಡುತ್ತಿದ್ದಾರೆ. ಆಳ್ವಾಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಕರಕುಶಲ ಕಲೆಯ ವಿಶೇಷ ಉಚಿತ ತರಬೇತಿ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಒಣ ಹುಲ್ಲಿನಿಂದ ತರಹೇವಾರಿ ಬಾಸ್ಕೆಟ್‌ಗಳು, ಟೀಕೋಸ್ಟರ್‍ಸ್, ಹೋಮ್ ಡೆಕೋರೇಟರ್‍ಸ್, ಲಾಂಡ್ರೀ ಬಾಸ್ಕೆಟ್, ವೆನೆಟೀ ಬ್ಯಾಗ್‌ಗಳು ಮತ್ತು ಪರ್ಸ್‌ಗಳು ತಯಾರಾಗಿವೆ. ಚರ್ಮದಿಂದ ತಯಾರಿಸಿದ ಪರ್ಸ್ ಮತ್ತು ಬ್ಯಾಗ್‌ಗಳು ಆಕರ್ಷಕವಾಗಿವೆ. ಇನ್ನು ಜೋಳದ ಒಣ ಸಿಪ್ಪೆಗಳಿಂದ ತಯಾರಿಸಿದ ಬಣ್ಣ ಬಣ್ಣದ ಹೂವುಗಳು ನೋಡುಗರ ಗಮನ ಸೆಳೆಯುತ್ತಿದೆ. ಹೀಗೆ ಬೇಡಿಕೆ ಇರುವ ಹತ್ತು ಹಲವು ವಸ್ತುಗಳನ್ನು ಸ್ಪಾಟ್‌ನಲ್ಲಿಯೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರ ಊರಿನವರಾದ ಇವರು ಶಾಲಾ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಈ ಕಲೆಯ ಕುರಿತಾದ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ವಿಶೇಷವೆಂದರೆ ಜಾಂಬೂರಿಯ ಕಲಾ ಮೇಳದಲ್ಲಿ ಮಕ್ಕಳಿಗೆ ಇಂತಹದ್ದೊಂದು ವಿಶೇಷ ಕಲೆಯ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಲವಾರು ಆಸಕ್ತ ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೆ.

ದವಲಪ್ಪ ಟಿ. ಸಾತಪುತೆ ಸುಮಾರು 30 ವರ್ಷಗಳಿಂದ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ನಾವು ಕಲಿತ ಕಲೆಗೆ ಬೆಲೆ ಸಿಗುವುದು ಅದನ್ನು ನಾಲ್ಕು ಜನಕಲಿತು ಉಪಯೋಗಿಸಿಕೊಂಡಾಗ ಮಾತ್ರ ಎಂಬುದು ಅವರ ಅಭಿಪ್ರಾಯ.

ವರದಿ: ಪ್ರೀತಿ ಹಡಪದ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

Exit mobile version