ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಮಣ್ಣಿನ ಕಳಸ ಹೊತ್ತು ಮೆರವಣಿಗೆ ಹೊರಟ ಹೆಣ್ಣು ಮಕ್ಕಳು, ಕಚ್ಚೆ ಕಟ್ಟಿ ತಮಟೆ ಭಾರಿಸುತ್ತಿದ್ದ ಹುಡುಗರು… ಕತ್ತಿ ಹಿಡಿದು ಗೋವಿಂದ…ಗೋವಿಂದ…. ಎಂದು ದೇವರ ನಾಮ ಸ್ಮರಿಸುತ್ತಿದ್ದ ವೀರ ಕುಮಾರರ ಪಾತ್ರಧಾರಿಗಳು, ನಂದಿಕೋಲು ಹಿಡಿದು ಕುಣಿಯುತ್ತಿದ್ದ ನೃತ್ಯಗಾರರು…. ಕರಗದ ಪಾತ್ರಧಾರಿ ಕುಣಿಯುತ್ತ ವೇದಿಕೆಗೆ ಬಂದದ್ದೆ ತಡ, ಪ್ರೇಕ್ಷಕರ ಕೇಕೆ ಕರತಾಡನ ಮುಗಿಲು ಮುಟ್ಟತ್ತು…. ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿಶಿಷ್ಟ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಜಾಂಬೂರಿಯಲ್ಲಿ “ಏಕ ಭಾರತ ಶ್ರೇಷ್ಠ ಭಾರತ” ಸಂದೇಶ ಸಾರುವ ಜಿಲ್ಲಾವಾರು ಸಾಂಸ್ಕೃತಿಕ ಪ್ರದರ್ಶನವನ್ನು ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು. “ಬೃಹತ್ ಬೆಂಗಳೂರು ಸಾಂಸ್ಕೃತಿಕ ವೈಭವ” ಎನ್ನುವ ಶಿರ್ಷಿಕೆಯೊಂದಿಗೆ ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಾಧನೆ, ಬೆಂಗಳೂರು ಇತಿಹಾಸ ಸಾರುವ ರೂಪಕ, ಪಟಕುಣಿತ, ಅಣ್ಣಮ್ಮ ತಾಯಿ ಉತ್ಸವ, ದ್ರೌಪದಿ ಧರ್ಮರಾಯ ಕರಗ ಉತ್ಸವ, ನಂದಿಕೋಲು, ತಮಟೆ ವಾದನ ಪ್ರಕಾರಗಳನ್ನು ಪ್ರಸ್ತುತ ಪಡಿಸಿದರು.
ಈ ಮೂಲಕ ವಿಶ್ವದ ಮೊದಲ ಸಾಂಸ್ಕೃತಿಕ ಜಾಂಬೂರಿಯಲ್ಲಿ ಬೆಂಗಳೂರಿನ ವಿಶ್ವವಿಖ್ಯಾತ ಕರಗ, ಅಣ್ಣಮ್ಮ ಉತ್ಸವದ ಪರಿಚಯವಾಯಿತು. ಪ್ರದರ್ಶನದ ಬಳಿಕ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರಿಗೆ ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು ಬೆಂಗಳೂರು ಸಾಂಸ್ಕೃತಿಕ ಉತ್ಸವದ ಕುರಿತು ಮಾಹಿತಿ ನೀಡಿದರು.
ವರದಿ: ಶಾಮ ಪ್ರಸಾದ್ ಹನಗೋಡು, ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ