ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕಾಡು ಮತ್ತು ಪರ್ವತಗಳು ಚಾರಣ ಪ್ರಿಯರಿಗೆ ಒಂದು ವಿಶಿಷ್ಠ ಪ್ರಪಂಚ. ಜಾಂಬೂರಿಯ ಸಂಭ್ರಮದ ನಡುವೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿದ್ಯಾಗಿರಿಯಲ್ಲಿ ನಿರ್ಮಿಸಿರುವ ಟ್ರಕ್ಕಿಂಗ್ ಪಾತ್, ಆಳ್ವಾಸ್ ಆವರಣದಲ್ಲಿ ಹೊಸ ಲೋಕವನ್ನೇ ತೆರೆದಿಟ್ಟಿದೆ.
ಎತ್ತರದ ಗುಡ್ಡೆ, ಇಳಿಜಾರು, ತಗ್ಗು ಪ್ರದೇಶ, ಪ್ರಾಣಿಗಳ ಗೊಂಬೆ ಆಕೃತಿಗಳು, ಹುಲಿ- ಸಿಂಹಗಳ ಘರ್ಜನೆ, ಪ್ರಾಣಿ, ಹಕ್ಕಿಗಳ ದ್ವನಿ, ಹರಿಯುವ ನೀರು, ಜಲಪಾತ, ಕೃತಕವಾಗಿ ತಯಾರಿಸಿದ ಸೇತುವೆ ಈ ಎಲ್ಲವೂ ಚಾರಣದ ಅನುಭವವನ್ನೇ ನೀಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಾರ್ಗದ ಎರಡು ಬದಿಯಲ್ಲಿ ಹಗ್ಗವನ್ನು ಹಾಕಲಾಗಿದ್ದು ಇವುಗಳ ಸಹಾಯದಿಂದ ಎಲ್ಲಾ ವಯಸ್ಸಿನವರು ಚಾರಣ ಅನುಭವ ಪಡೆಯಬಹುದು. ಜಾಂಬೂರಿಗೆ ಬಂದ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಣೀಯ ಸ್ಥಳವಾಗಿದೆ ಟ್ರಕಿಂಗ್ ಪಾತ್.
ಈ ಕುರಿತು ಮಂಗಳೂರಿನ ಅಮೀನ್ ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರಕಿಂಗ್ ಪಾತ್ ಒಂದು ಮಿನಿ ಚಾರಣದ ಹಾಗೆ ಇದೆ. ಬಹಳ ಚೆನ್ನಾಗಿ ನಿರ್ಮಿಸಲಾಗಿದೆ. ಮುಂಜಾಗ್ರತಾ ಕ್ರಮಗಳು ಬಹಳ ಸಹಾಯಕವಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಈ ಟ್ರಕಿಂಗ್ ಖುಷಿ ನೀಡುತ್ತದೆ ಎಂದರು.
- ವರದಿ: ಶಾಮ ಪ್ರಸಾದ್ ಹನಗೋಡು, ಪ್ರಥಮ ಎಂಸಿಜೆ, ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಮ್ ಕಾಲೇಜು, ಉಜಿರೆ