Kundapra.com ಕುಂದಾಪ್ರ ಡಾಟ್ ಕಾಂ

ಜಾಂಬೂರಿಯಲ್ಲಿ ಬಾಹ್ಯಾಕಾಶದ ಸಮಗ್ರ ಪ್ರತಿಫಲನ

ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ:
ಬಾಹ್ಯಾಕಾಶ ಕ್ಷೇತ್ರವೆಂಬುವುದು ಹಲವು ಕೌತುಕ ಮತ್ತು ರೋಚಕ ಸಂಗತಿಗಳ ತಾಣ. ಗ್ರಾಮೀಣರೂ ಸೇರಿದಂತೆ ಹಲವು ಮಕ್ಕಳಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಈ ಕ್ಷೇತ್ರದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಮತ್ತು ಸೌರ ಮಂಡಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಸಂಚಾರಿ ಬಸ್ ಮತ್ತು ಮೇಳದ ಒಳಗೆ ರಾಕೆಟ್ ಉಡಾವಣಾ ವಾಹನ ಮತ್ತು ವಿವಿಧ ಕೃತಕ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ.

ನುಡಿಸಿರಿ ವೇದಿಕೆಯ ಪಕ್ಕದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಂಚಾರಿ ಬಸ್‌ನಲ್ಲಿ ಜಿ.ಎಸ್.ಎಲ್.ವಿ, ಪಿ.ಎಸ್.ಎಲ್.ವಿ., ಎ.ಎಸ್.ಎಲ್.ವಿ, ಎಸ್.ಎಲ್.ವಿ-೩, ಆರ.ಎಲ್.ವಿ. ಟಿ.ಡಿ ರಾಕೆಟ್ ಉಡಾವಣಾ ವಾಹನಗಳ ಮಾದರಿ, ಭಾರತದ ಮೊದಲ ಕೃತಕ ಉಪಗ್ರಹವಾದ ಆರ್‍ಯಭಟ, ರೋಹಿಣಿ, ಭಾಸ್ಕರ, ಇನ್ಸಾಟ್ ಮತ್ತು ಆಸ್ಟ್ರೋಸಾಟ್ ಮೊದಲಾದ ಕೃತಕ ಉಪಗ್ರಹಗಳ ಮಾದರಿ, ಚಂದ್ರಯಾನ ಮತ್ತು ಮಂಗಳಯಾನ-೧ ಮತ್ತು ಮಂಗಳಯಾನ-೨ ಕುರಿತಾದ ವಿಷಯವನ್ನೊಳಗೊಂಡ ಮಾದರಿ, ಭಾರತೀಯ ಪ್ರಾದೇಶಿಕ ನ್ಯಾವಿಗೇ?ನ್ ಉಪಗ್ರಹ ವ್ಯವಸ್ಥೆ- ‘ನಾವಿಕ್’, ಚಂದ್ರನ ಮೇಲ್ಮೈ ಗಗನಯಾತ್ರಿಗಳ ಕಲಾತ್ಮಕ ನೋಟ ಮತ್ತು ಚಂದ್ರಯಾನ -೨ ಬಾಹ್ಯಾಕಾಶ ನೋಟ ಬಿಂಬಿಸುವ ಮಾದರಿ ಭಾರತೀಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳು, ಭಾರತೀಯ ಉಪಗ್ರಹ ಸಂವಹನ ಅಪ್ಲಿಕೇಶನ್‌ಗಳ ಮಾದರಿ ಮುಂತಾದ ಹಲವಾರು ಮಾದರಿಗಳು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕುತೂಹಕ್ಕೆ ಕಾರಣವಾಗಿದೆ.

ಇನ್ನು ವಿಜ್ಞಾನ ಮಾದರಿಯ ಒಳಾಂಗಣದಲ್ಲಿ ಇತರ ಉಪಗ್ರಹಗಳನ್ನು ಉಡಾವಣೆ ಮಾಡಲು ಮತ್ತು ಬಾಹ್ಯಾಕಾಶ ಸಂಶೋಧನಾ ಉದ್ದೇಶಗಳಿಗಾಗಿ ಬಳಸುವ ಪಿ.ಎಸ್.ಎಲ್.ವಿ ಮತ್ತು ಬಾಹ್ಯಾಕಾಶ-ಸಂಬಂಧಿತ ಸಂವಹನ ಉಪಗ್ರಹಗಳನ್ನು ತಲುಪಿಸಲು ಇಸ್ರೋ ನಿರ್ಮಿಸಿದ ಉಪಗ್ರಹ ವಾಹನವಾದ ಜಿ.ಎಸ್.ಎಲ್.ವಿ ವಾಹನಗಳನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ವಿವಿಧ ಉಪಗ್ರಹಗಳನ್ನು ಕಾರ್ಯವೈಖರಿಯ ೫ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಪ್ರತಿನಿತ್ಯ ಉಪಯೋಗಿಸುವ ಮೊಬೈಲ್, ಎ.ಟಿ.ಎಂ. ಮೊದಲಾದ ಸಂಪರ್ಕ ಸಾಧನಗಳ ಸಂಪರ್ಕಕ್ಕೆ ಅವಶ್ಯಕವಾಗುವ ಉಪಗ್ರಹವಾದ ಸಂಪರ್ಕ ಉಪಗ್ರಹ, ನೇವಿಗೇಶನ್‌ಗೆ ಸಹಾಯಕವಾಗುವ ನೇವಿಗೇಶನ್ ಸಿಸ್ಟಮ್ ಸ್ಯಾಟಲೈಟ್, ಭೂಮಿಯ ಮೇಲ್ಮೈ ಮೇಲಿರುವ ಖನಿಜಗಳನ್ನು ಪತ್ತೆಹಚ್ಚಲು ಸಹಾಯಕವಾಗುವ ದೂರ-ಸಂವೇದಿ ಉಪಗ್ರಹ, ಬ್ರಹ್ಮಾಂಡ ಅಥವಾ ಸೌರಮಂಡಲಕ್ಕೆ ಸಂಬಂಧಪಟ್ಟ ವೈಜ್ಞಾನಿಕ ಸಂಶೋಧನೆಗೆ ಸಹಾಯಕವಾಗುವ ಸೈಂಟಿಫಿಕ್ ಸ್ಯಾಟಲೈಟ್, ಚಂದ್ರಯಾನ ಮತ್ತು ಮಂಗಳಯಾನ ಹಾಗೂ ಸೌರ ಮಂಡಲದ ವಿವಿಧ ಗ್ರಹಗಳು ಮತ್ತು ಭಾಗಗಳ ಬಗ್ಗೆ ಅಧ್ಯಯನ ನಡೆಸಲು ಉಪಯೋಗವಾಗುವ ಇಂಟರ್‌ಪ್ಲಾನೆಟರಿ ಸ್ಯಾಟಲೈಟ್‌ಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿವೆ.

ಇಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆರಂಭದಿಂದ ಇಂದಿನ ದಿನದವರೆಗೆ ಬೆಳೆದುಬಂದ ಹಾದಿಯನ್ನು ವಿವರಿಸುವ ಮಾಹಿತಿ, ಭಾರತದ ಪ್ರಥಮ ಮಾನವಸಹಿತ ಅಂತರಿಕ್ಷಯಾನದ ವಿವರಣೆ, ವೈಜ್ಞಾನಿಕ ಮತ್ತು ಅಂತರ್‌ಗ್ರಹ ಪರಿಯೋಜನೆಗಳ ಸ್ವರೂಪ, ಸಂಪರ್ಕ ಉಪಗ್ರಹಗಳಿಂದ ಬದಲಾದ ಜಗತ್ತಿನ ಆಯಾಮಗಳು, ಬೆಂಗಳೂರಿನಲ್ಲಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರ, ಯು.ಆರ್.ಸಿ.ಯಲ್ಲಿ ಉಪಗ್ರಹ ನಿರ್ಮಾಣದ ಆರಂಭಿಕ ದಿನಗಳ ಮಾಹಿತಿಗಳನ್ನೊಳಗೊಂಡ ಫಲಕಗಳು ಇಲ್ಲಿವೆ.

Exit mobile version