ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಆಶ್ರಯದಲ್ಲಿ ಆಯೋಜಿಸಿದ್ದ ಅಂತರಕಾಲೇಜು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಆತ್ರಾಡಿ ಪ್ರಮೋದ್ ಶೆಟ್ಟಿ, 67ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಅಂತರ್ ವಿ.ವಿ. ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದು ಮಂಗಳೂರು ವಿ.ವಿ.ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಳ್ವಾಸ್ ಗೆ ಒಲಿದ ಚೊಚ್ಚಲ ಚಿನ್ನದ ಪದಕವಾಗಿದೆ. ರಾಷ್ಟ್ರೀಯ ಮಟ್ಟದ ಅಂತರ್ ವಿ.ವಿ. ಕರಾಟೆ ಸ್ಪರ್ಧೆಯು ಜನವರಿ ಎರಡನೇ ವಾರದಲ್ಲಿ ಛತ್ತೀಸ್ ಘರ್ ರಾಜ್ಯದ ಭಿಲಾಸ್ ನಗರದ ಅಟಲ್ ಬಿಹಾರಿ ವಾಜಪೇಯಿ ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿದೆ.
ಆಳ್ವಾಸ್ ಸಾಂಸ್ಕೃತಿಕ ಯೋಜನೆಯ ಅಡಿಯಲ್ಲಿ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ಪದವಿ ವ್ಯಾಸಂಗ ಮಾಡುತ್ತಿರುವ ಪ್ರಮೋದ್, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಹಲವಾರು ನಾಟಕದಲ್ಲಿ ಅಭಿನಯಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧೆಗೈಯುತ್ತಿರುವ ಪ್ರಮೋದ್ ಅವರನ್ನು, ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ರಂಗ ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ, ಪ್ರಾಂಶುಪಾಲರಾದ ಡಾ. ಕುರಿಯನ್, ದೈಹಿಕ ಶಿಕ್ಷಣ ನಿರ್ದೇಶಕರಾದ ತಿಲಕ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.