Kundapra.com ಕುಂದಾಪ್ರ ಡಾಟ್ ಕಾಂ

40,000ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಬೃಹತ್ ಯೋಗ

ಯೋಗ ಹಾಗೂ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡ ಜಾಂಬೂರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಭಾರತ್ ಸೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೊನೆಯ ದಿನ ಪುತ್ತಿಗೆ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ 40,000 ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಬೃಹತ್ ಯೋಗ ಪ್ರಾತ್ಯಕ್ಷಿಕೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಿಲಾಗ್ರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲ ಫಾದರ್ ಫ್ರಾನ್ಸಿಸ್ ಗ್ಸೇವಿಯರ್ ಗೋಮ್ಸ್, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಸಂಸ್ಕೃತಿ, ಕಲೆ, ವಿಜ್ಞಾನ, ಸಾಹಿತ್ಯ, ಮನೋರಂಜನೆ ಮುಂತಾದ ಆಯಾಮಗಳನ್ನೊಳಗೊಂಡ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜಾಂಬೂರಿಗೆ ಆಗಮಿಸಿದ್ದ ದೇಶದ ವಿವಿಧ ಪ್ರದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಅನುಭವ ನೀಡಿದೆ. ಜಾಂಬೂರಿಯಲ್ಲಿ ಕಲಿತ ಎಲ್ಲಾ ವಿಚಾರಗಳನ್ನು ಕೂಡ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು. ಜಾಂಬೂರಿಯೂ ವಿದ್ಯಾರ್ಥಿಗಳ ಯೋಚನಾ ಕ್ರಮದಲ್ಲಿ, ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯದಲ್ಲಿ ಬದಲಾವಣೆಗಳನ್ನು ತಂದಿದ್ದು ಸಮಾಜದಲ್ಲಿರುವ ವಿವಿಧ ಮನಸ್ಥಿತಿಯ ಜನರೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದೆ. ಕ್ರಿಸ್ಮಸ್ ಹಬ್ಬವು ಈಗಾಗಲೇ ಪ್ರಾರಂಭವಾಗಿದ್ದು ಎಲ್ಲರನ್ನು ಪ್ರೀತಿಸಿ ಮತ್ತು ಕ್ಷಮಿಸಿ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ನಮ್ಮನ್ನು ನಾವು ಪ್ರೀತಿಸಿದಾಗ ಎಲ್ಲಾ ನಕಾರಾತ್ಮಕ ಭಾವನೆಗಳು ನಮ್ಮಿಂದ ದೂರವಾಗಿ ಸದ್ಭಾವನೆಗಳು ಇಮ್ಮಡಿಕೊಳ್ಳುತ್ತದೆ. ಪ್ರೀತಿಯಿಂದ ಮಾತ್ರ ದ್ವೇ?, ತಾರತಮ್ಯ, ತಪ್ಪು ತಿಳುವಳಿಕೆ ಮತ್ತು ನೋವನ್ನು ದೂರಗೊಳಿಸಲು ಸಾಧ್ಯ ಆದ್ದರಿಂದ ಎಲ್ಲರನ್ನೂ ಪ್ರೀತಿಸಿ ಎಂದರು.

ಸಮಸ್ತ ಸುನ್ನಿ ಯುವಜನ ಸಂಘದ ದಕ್ಷಿಣ ಕನ್ನಡ, ಸ್ಟೇಟ್ ಜನರಲ್ ಸೆಕ್ರೆಟರಿ ಜಾರಿಮಿಸ್ ಅಸೋಸಿಯೇ?ನ್, ಜರುಸಲೆಂ ಅಕಾಡೆಮಿಯ ಸಂಶುಲ್ ಉಲೇಮಾ ಸ್ಮಾರಕದ ಅಧ್ಯಕ್ಷ ಮೌಲಾನ ಹಾಜಿ ಅಬ್ದುಲ್ ಅಝೀಜ್ ಜಾರಿಮೀ ಚಕ್ಕಬೆಟ್ಟು ಮಾತನಾಡಿದ, ಭಗವದ್ಗೀತೆ, ಕುರಾನ್, ಬೈಬಲ್ ಮುಂತಾದ ಧರ್ಮ ಗ್ರಂಥಗಳಲ್ಲಿ ಹಾಗೂ ಬಸವಣ್ಣ, ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಅನೇಕ ಸಮಾಜ ಸುಧಾರಕರು ಮಾನವರೆಲ್ಲರೂ ಒಂದೇ, ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಸಾರಿದ್ದಾರೆ. ಒತ್ತಡದಿಂದ ಪ್ರೀತಿ ಕರುಣೆಯನ್ನು ಪಡೆಯಲು ಸಾಧ್ಯವಿಲ್ಲ ಹಾಗೂ ಸ್ವೀಕರಿಸಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಿ ಎಂದರು.

ಮೂಡುಬಿದರೆ ಜೈನಮಠದ ಸ್ವಸ್ವಿಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜಗತ್ತು ಅನೇಕ ಜಾತಿ, ಭಾ?, ಧರ್ಮದವರನ್ನು ಒಳಗೊಂಡಿದೆ ದೇಶದ ಜನರು ಧರ್ಮ ಸಾಮರಸ್ಯದಿಂದಿರಬೇಕು ಹಾಗಾದಾಗ ಮಾತ್ರ ದೇಶದ ವಿಕಾಸ ಸಾಧ್ಯ. ಈ ವಿಶ್ವದಲ್ಲಿ ನಮ್ಮ ಇರುವಿಕೆ ಇರುವುದರಿಂದ ವಿಶ್ವದ ಪ್ರತಿಯೊಂದು ಜೀವಿಯ ಮೇಲೆ ಕ್ಷಮೆ, ಕರುಣೆ, ಅನುಕಂಪ, ದಯೆ, ಸಂಯಮ ಮುಂತಾದ ಗುಣಗಳನ್ನು ಹೊಂದಿರಬೇಕು. ವೇದವ್ಯಾಸ, ಕಣಾದ ಮುಂತಾದ ಋಷಿಮುನಿಗಳು ಅನೇಕ ವಿಚಾರಗಳನ್ನು ನಮಗೆ ನೀಡಿದ್ದಾರೆ. ಮಾನವರು ಪ್ರಾಣಿ ಪಕ್ಷಿಗಳೊಂದಿಗೆ ಸಂಯಮದಿಂದ ವರ್ತಿಸುವ ರೀತಿಯನ್ನು ಕಲಿತುಕೊಂಡಿದ್ದಾರೆ ಆದರೆ ಮನು?- ಮನು?ರ ನಡುವೆ ತಾಳ್ಮೆಯಿಂದ ವರ್ತಿಸುವ ರೀತಿಯನ್ನು ಕರಗತ ಮಾಡಿಕೊಂಡಿಲ್ಲ ಇದನ್ನು ಕಲಿತಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆದ್ದರಿಂದ ನಿರುಪಯುಕ್ತ ವಸ್ತುಗಳನ್ನು ತೊರೆದು ಉತ್ತಮವಾದದ್ದನ್ನೇ ಯೋಚಿಸೋಣ ಎಂದರು.

ಸೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಭಾರತ್ ಸ್ಕೌಟ್ಸ್-ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂದ್ಯಾ ಅವರು ಧ್ವಜಾವರೋಹಣದ ಮೂಲಕ ಏಳು ದಿನಗಳ ಮೆಗಾ ಕಾರ್ಯಕ್ರಮಕ್ಕೆ ಮುಕ್ತಾಯ ಘೋಷಿಸಿದರು. ಈ ಮೂಲಕ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಸಂಪನ್ನಗೊಂಡಿತು.

Exit mobile version