ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಷಷ್ಠಿ ಮಹೋತ್ಸವವು ಜರುಗಿತು.

ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಪೂಜೆ, ಪಂಚಾಮೃತ, ಮಡಿ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ಮಡೆಸ್ನಾನ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ನಡೆದವು.
ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಸಂದರ್ಭದಲ್ಲಿ ಮಡೆಸ್ನಾನ ಹರಕೆ ಪದ್ಧತಿಯಿದ್ದು ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಿ ಬಂದ ಸಹಸ್ರಾರು ಭಕ್ತರು ಶ್ರೀ ದೇವರ ಪೌಳಿಯಲ್ಲಿ ಉರುಳು ಸೇವೆ ಮಾಡಿ ಹರಕೆ ಸಮರ್ಪಿಸಿದರು. ಭಕ್ತರು ಬೆಳ್ಳಿ ಹರಕೆ ಸೇವೆಯನ್ನು ಸಲ್ಲಿಸಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಳದ ಉತ್ಸವ ಸಮಿತಿ ಆಡಳಿತ ಮೊಕೆಸ್ತರ ಬಿ. ಅರುಣ್ ಕುಮಾರ ಶೆಟ್ಟಿ ಹಾಗೂ ಸ್ವಯಂಸೇವಕರುಗಳು ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದರು.