Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಆಗ್ರಹಿಸಿ ಶಾಸಕರಿಗೆ ಮನವಿ

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗೊಳ್ಳಿಯ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಆಗ್ರಹಿಸಿ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಹೋರಾಟ ಸಮಿತಿ ವತಿಯಿಂದ ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಇಂದು ಕಟ್‌ಬೇಲ್ತೂರಿನ ಶಾಸಕರ ನಿವಾಸದಲ್ಲಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ನಿಯೋಗವು ಶಾಸಕರಿಗೆ ಸಬ್‌ಸ್ಟೇಶನ್‌ನ ಇಲ್ಲಿಯವರೆಗಿನ ಸಂಪೂರ್ಣ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿತು.

ಗಂಗೊಳ್ಳಿಯಲ್ಲಿ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಗೊಂಡಲ್ಲಿ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ ಹಾಗೂ ಹೊಸಾಡು ಗ್ರಾಮಗಳ ಸಹಸ್ರಾರು ಸಂಖ್ಯೆಯ ಗ್ರಾಹಕರಿಗೆ, ಉದ್ಯಮಿಗಳಿಗೆ ಹಾಗೂ ಸಣ್ಣ ಮತ್ತು ದೊಡ್ಡ ಉದ್ದಿಮೆದಾರರಿಗೆ ಬಹಳಷ್ಟು ಅನುಕೂಲವಾಗಲಿದೆ ಅಲ್ಲದೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಮಂಡಳಿಗೆ ಬಹಳಷ್ಟು ವಿದ್ಯುತ್ ಉಳಿತಾಯದ ಜೊತೆಗೆ ಹೆಚ್ಚಿನ ಆದಾಯ ಕೂಡ ಬರಲಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಗಂಗೊಳ್ಳಿ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಅರಣ್ಯ ಇಲಾಖೆ ಅನಗತ್ಯ ಕ್ಯಾತೆ ತೆಗೆದು ಅಡ್ಡಪಡಿಸುತ್ತಿರುವುದು ಖಂಡನೀಯ. ಈ ವಿಚಾರವಾಗಿ ತಾವು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಈ ಘಟಕದ ಕಾರ್ಯಾರಂಭಕ್ಕೆ ಎದುರಾಗಿರುವ ತೊಡಕುಗಳ ನಿವಾರಣೆಗೆ ಪ್ರಯತ್ನಿಸಿರುವುದು ಅಭಿನಂದನೀಯ. ತಮ್ಮ ನಿರಂತರ ಪ್ರಯತ್ನ ಹಾಗೂ ಹೋರಾಟದ ಹೊರತಾಗಿಯೂ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಎದುರಾಗಿರುವ ಅಡ್ಡಿಗಳು ದೂರವಾಗಿಲ್ಲ. ಹೀಗಾಗಿ ತಾವು ಆದಷ್ಟು ಶೀಘ್ರ ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭ ಮಾಡಲು ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಒಂದು ತಿಂಗಳೊಳಗೆ ಗ್ರಾಮಸ್ಥರ ಮನವಿಗೆ ಯಾವುದೇ ಸಕಾರಾತ್ಮ ಸ್ಪಂದನೆ ದೊರೆಯದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ ಈ ವಿಚಾರವಾಗಿ ಅನಗತ್ಯವಾಗಿ ಕ್ಯಾತೆ ತೆಗೆಯುವುದನ್ನು ಮುಂದುವರಿಸಿದ್ದಲ್ಲಿ ನಾಲ್ಕು ಗ್ರಾಮ ಪಂಚಾಯತ್‌ಗಳ ಗ್ರಾಮಸ್ಥರು ಸೇರಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ನಮ್ಮ ಈ ಹೋರಾಟಕ್ಕೆ ಮತ್ತು ಗಂಗೊಳ್ಳಿ ಮೆಸ್ಕಾಂ ಸಬ್‌ಸ್ಟೇಶನ್ ಕೂಡಲೇ ಕಾರ್ಯಾರಂಭ ಮಾಡಲು ತಮ್ಮ ಸಲಹೆ ಸಹಕಾರವನ್ನು ನೀಡಬೇಕು ಎಂದು ಸಮಿತಿಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಗೋಪಾಲ ಪೂಜಾರಿ, ಗಂಗೊಳ್ಳಿ ಸಬ್‌ಸ್ಟೇಶನ್ ಬಗ್ಗೆ ಈಗಾಗಲೇ ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಅರಣ್ಯ ಇಲಾಖೆ ಆಕ್ಷೇಪ ತೆಗೆದಿರುವುದರಿಂದ ಸ್ವಲ್ಪ ತೊಂದರೆಯಾಗಿದ್ದು, ಈ ಆಕ್ಷೇಪಗಳನ್ನು ಕೂಡಲೇ ನಿವಾರಿಸಲು ಪ್ರಯತ್ನ ನಡೆಸಲಾಗುವುದು. ಅರಣ್ಯ ಇಲಾಖೆಗೆ ಮೆಸ್ಕಾಂ ಪಾವತಿಸಬೇಕಾಗಿರುವ ಹಣವನ್ನು ಪಾವತಿಸಲು ಕ್ರಮಕೈಗೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಅಗತ್ಯ ಬಿದ್ದರೆ ಇಂಧನ ಸಚಿವರನ್ನು ಭೇಟಿ ಮಾಡಿ ಸೂಕ್ತಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಅವರು ಭರವಸೆ ನೀಡಿದರು.

ಸಮಿತಿಯ ಗೌರವಾಧ್ಯಕ್ಷರಾದ ಎಚ್.ಗಣೇಶ ಕಾಮತ್, ಎಂ.ಎಂ.ಸುವರ್ಣ, ಸಮಿತಿಯ ಕಾರ್ಯದರ್ಶಿಗಳಾದ ರಾಮನಾಥ ಚಿತ್ತಾಲ್ ಗುಜ್ಜಾಡಿ, ಬಿ.ಗಣೇಶ ಶೆಣೈ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಹೊಸಾಡು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ದಯಾಕರ ಮೇಸ್ತ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಬಿ.ರಾಘವೇಂದ್ರ ಪೈ, ಉಮಾನಾಥ ದೇವಾಡಿಗ, ರವೀಂದ್ರ ಪಟೇಲ್, ದಿಲೀಪ ಖಾರ್ವಿ, ಮೋಹನ ನಾಯ್ಕ್ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು.

Exit mobile version