Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಚಂದ್ರಶೇಖರ ನಾವಡರ ‘ಸೈನಿಕನ ಆಂತರ್ಯದ ಪಿಸುನುಡಿ’ ಕೃತಿ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ದೇಶದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು ತಮ್ಮ ಜೀವದ ಹಂಗು ತೊರೆದು ನಮ್ಮನ್ನು ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ ಎಂದು ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.

ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಭಾನುವಾರ ಲೇಖಕ ಬೈಂದೂರು ಚಂದ್ರಶೇಖರ ನಾವಡರ ’ಸೈನಿಕನ ಆಂತರ್ಯದ ಪಿಸುನುಡಿ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ದೇಶದ ಭದ್ರತೆ ಮತ್ತು ರಕ್ಷಣೆಗೆ ಗಡಿಭಾಗದಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ದೈನಂದಿನ ಚಟುವಟಿಕೆಗಳು, ಅವರ ಜೀವನಶೈಲಿಯನ್ನು ನಿವೃತ್ತ ಸೈನಿಕ, ಲೇಖಕರು ಎಳೆಎಳೆಯಾಗಿ ತಮ್ಮ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ತಮ್ಮ ನೈಜ ಅನುಭವದ ಘಟನಾವಳಿಗಳನ್ನು ಭಾವನಾತ್ಮಕವಾಗಿ ಪುಸ್ತಕ ರೂಪದಲ್ಲಿ ಮೆಲುಕು ಹಾಕಿರುವುದು ಖುಷಿ ನೀಡಿದೆ ಎಂದರು.

ದೇವಳದ ಸೇವ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಸಾಲಿಗ್ರಾಮದ ಲೆಫ್ಟಿನೆಂಟ್ ಗಣೇಶ ಅಡಿಗ ಇವರನ್ನು ಸನ್ಮಾನಿಸಲಾಯಿತು. ಲೇಖಕಿ ಪೂರ್ಣಿಮಾ ಭಟ್ಟ ಕಮಲಶಿಲೆ ಕೃತಿ ಪರಿಚಯ ಮಾಡಿದರು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಇದ್ದರು.

ಲೇಖಕ ಬೈಂದೂರು ಚಂದ್ರಶೇಖರ ನಾವಡ ಪ್ರಾಸ್ತಾವಿಕ ಮಾತನಾಡಿ, ಸೈನ್ಯ, ಸೈನಿಕರ ಬಗ್ಗೆ ಸಮಾಜಕ್ಕೆ ಗೊತ್ತಿರದ ಹಾಗೂ ಜನಸಾಮಾನ್ಯರಿಗಿರುವ ಕುತೂಹಲವನ್ನು ನೀಗಿಸುವ ಉದ್ದೇಶದಿಂದ ಓರ್ವ ಸಾಮಾನ್ಯ ಸೈನಿಕನಾಗಿ ಸೇನೆಯೊಳಗಿನ ನನ್ನ ಬದುಕನ್ನು ಪುಸ್ತಕದ ಮೂಲಕ ತೆರೆದಿಟ್ಟಿದ್ದೇನೆ ಎಂದರು.

ಆಶ್ರಿತಾ ಭಟ್ ಹಾಗೂ ಮಧುರಾ ನಾವಡ ಪ್ರಾರ್ಥಿಸಿದರು. ಕಸಾಪ ಬೈಂದೂರು ಘಟಕದ ಅಧ್ಯಕ್ಷ ಡಾ. ರಘು ನಾಯ್ಕ ಸ್ವಾಗತಿಸಿದರು.. ಉಪನ್ಯಾಸಕ ಪಾಂಡುರಂಗ ಮೊಗವೀರ ಕಾರ್ಯಕ್ರಮ ನಿರ್ವಹಿಸಿದರು.

Exit mobile version