Kundapra.com ಕುಂದಾಪ್ರ ಡಾಟ್ ಕಾಂ

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ, ಬೈಂದೂರು ತಗ್ಗರ್ಸೆಯ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಕನ್ನಡ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮೂಲತಃ ಬೈಂದೂರಿನವರು. ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಕರ್ನಾಟಕದಲ್ಲಿ ಪೂರ್ಣಗೊಳಿಸಿ ವೃತ್ತಿಯನ್ನು ಅರಸಿ ಕತಾರ್’ಗೆ 2007ರಲ್ಲಿ ಪಯಣ ಬೆಳೆಸಿದರು. ಉದ್ಯೋಗದ ಜೊತೆಗೆ ಕತಾರ್ ಕರ್ನಾಟಕ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆಡಳಿತ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಸದಸ್ಯತ್ವ ಸಂಚಾಲಕರಾಗಿ ಸಂಘ ಬೆಳೆಯಲು ಹಾಗೂ ಅದರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು.

ಮಂದೆ ಐಸಿಬಿಎಫ್ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಇದರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿತು. ಇವರ ಕಾರ್ಯಕ್ಷಮತೆಯನ್ನು ಭಾರತೀಯ ದೂತಾವಾಸದ ಕಾರ್ಯಾಲಯವು ಗಮನಿಸಿ ಶ್ಲಾಘಿಸಿತು. ಪೂರ್ವ ರಾಯಭಾರಿಗಳು, ಸುಬ್ರಹ್ಮಣ್ಯ ಅವರಿಗೆ ಅಭಿನಂದಿಸಿ ಪ್ರಮಾಣಪತ್ರವನ್ನು ಹಾಗೂ ನೆನಪಿನ ಕಾಣಿಕೆಯನ್ನು ನೀಡಿದ್ದಾರೆ.

ಮಹಾಮಾರಿಯ ಕರೋನಾ ಉತ್ತುಂಗದಲ್ಲಿದ್ದ ಕಾಲದಲ್ಲಿ ಎಲ್ಲರೂ ಮನೆಯಿಂದ ಹೊರಬರಲು ಹೆದರುತ್ತಿದ್ದ ಸಂದರ್ಭ, ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ದೈನಂದಿನ ಚಟುವಟಿಕೆಯಂತೆ ಮುಂಜಾನೆ ತಮ್ಮ ವಾಹನದಲ್ಲಿ ತರಕಾರಿ ಊಟದ ಪೊಟ್ಟಣಗಳನ್ನು ತುಂಬಿಸಿಕೊಂಡು ಸುಮಾರು 200 ಜನರಿಗೆ ಅದನ್ನು ಹಂಚುತ್ತಿದ್ದರು ಸುಮಾರು ನಾಲ್ಕು ತಿಂಗಳು ಪ್ರತಿದಿನ ಮಾಡಿದ ನಿಸ್ವಾರ್ಥ ಸೇವೆ. ನಂತರ ಭಾರತ ವಿಶೇಷ ವಿಮಾನ ಸೇವೆಗೆ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂದಿರುಗಲು ಸಹಾಯ ಮಾಡಿದರು. ಕತಾರಿನಲ್ಲಿ ಕನ್ನಡ ಚಲನಚಿತ್ರಗಳ ಬಿಡುಗಡೆ ಮಾಡಲು ಬಹಳ ಶ್ರಮಿಸಿದ್ದಾರೆ.

Exit mobile version