Kundapra.com ಕುಂದಾಪ್ರ ಡಾಟ್ ಕಾಂ

ಸಾಂಪ್ರದಾಯಿಕ ನಾಡದೋಣಿಗಳಿಗೆ ಪೂರ್ಣ ಪ್ರಮಾಣದ ಸೀಮೆಎಣ್ಣೆ ಒದಗಿಸಿ – ಬಿ. ನಾಗೇಶ್ ಖಾರ್ವಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಔಟ್ ಬೋರ್ಡ್ ಇಂಜಿನ್ ಅಳವಡಿಸಿ ಮೀನುಗಾರಿಕೆ ಮಾಡುವ ಸಾಂಪ್ರದಾಯಿಕ ನಾಡದೋಣಿಗಳಿಗೆ ರಾಜ್ಯ ಸರಕಾರ ಈ ಹಿಂದೆ ಒದಗಿಸುತ್ತಿರುವ ಮಾಸಿಕ ತಲಾ 150 ಲೀಟರ್ ಸೀಮೆಎಣ್ಣೆ ಮಾತ್ರ ಒದಗಿಸುತ್ತಿದ್ದು, ಸರಕಾರ ನೀಡುವ ಸೀಮೆಎಣ್ಣೆ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ನಾಡದೋಣಿಯವರು ಪ್ರತಿದಿನ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಲು ಕಷ್ಟವಾಗಿರುತ್ತದೆ. ಸೀಮೆಎಣ್ಣೆ ಪ್ರಮಾಣವನ್ನು 300 ಲೀಟರಿಗೆ ಏರಿಸಿದ್ದರೂ ಈ ತನಕ ಹಂಚಿಕೆ ಮಾಡದೇ ಮೀನುಗಾರರಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ಬಿ. ನಾಗೇಶ್ ಖಾರ್ವಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಲ್ಲಿ 2021-22ನೇ ಸಾಲಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಒಟ್ಟು 8,030 ಮೀನುಗಾರಿಕಾ ದೋಣಿಗಳಿಗೆ 3,540 ಕೆ.ಎಲ್ ಪ್ರಮಾಣದ ಸೀಮೆಎಣ್ಣೆಯನ್ನು ವಿಶೇಷ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 2,610 ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪರ್ಮಿಟ್ ನೀಡಲಾಗಿದ್ದು, ನಂತರ ಈಗ ಹೊಸದಾಗಿ ಸುಮಾರು 1,900 ಮೀನುಗಾರಿಕಾ ದೋಣಿಗಳು ಸೇರ್ಪಡೆಯಾಗಿದ್ದು ಅವರಿಗೂ ಸೀಮೆಎಣ್ಣೆ ಪರ್ಮಿಟ್ ಇಲಾಖೆಯಿಂದ ನೀಡಲಾಗಿದ್ದರೂ, ಈ 1,900 ನಾಡ ದೋಣಿಗಳಿಗೆ ಸೀಮೆಎಣ್ಣೆ ಪ್ರಮಾಣ ಹೆಚ್ಚುವರಿಯಾಗಿ ಸರಕಾರ ಬಿಡುಗಡೆ ಈ ವೆರೆಗೆ ಮಾಡಲಿಲ್ಲ. ಈ ಹಿಂದೆ ಉಡುಪಿ ಜಿಲ್ಲೆಯ ಪರ್ಮಿಟ್ ಹೊಂದಿದ 2,600 ಮೀನುಗಾರಿಕೆ ದೋಣಿಗಳಿಗೆ ಹಂಚಿಕೆಯಾದ 783 ಕೆ.ಎಲ್. ಸೀಮೆಎಣ್ಣೆಯನ್ನು ಈಗ ಹೊಸದಾಗಿ ಸೇರ್ಪಡೆಯಾದ ಸುಮಾರು 1,900 ನಾಡದೋಣಿಗಳು ಮತ್ತು ಈ ಹಿಂದೆ ಪರ್ಮಿಟ್ ಹೊಂದಿದ 2,610 ದೋಣಿಗಳು ಒಟ್ಟು ಸೇರಿ 4,510 ದೋಣಿಗಳಿಗೆ ತಲಾ 150 ಲೀಟರ್ ನಂತೆ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದ್ದಾರೆ. ಆದರೆ ಈ 260 ಲೀಟರ್ ಸೀಮೆಎಣ್ಣೆ ಮೀನುಗಾರಿಕೆಗೆ ಏನೇನು ಸಾಲದು ಎಂದಿದ್ದಾರೆ.

ಸರಕಾರ ನೀಡುವ ಸೀಮೆಎಣ್ಣೆ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ನಾಡದೋಣಿಯವರು ಪ್ರತಿದಿನ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಲು ಕಷ್ಟವಾಗಿರುತ್ತದೆ. ಸೀಮೆಎಣ್ಣೆಯ ಸಮಸ್ಯೆಯಿಂದಾಗಿ ಸಮುದ್ರಕ್ಕೆ ಹೋಗಿ ಮೀನುಗಾರಿಕೆ ಮಾಡಲಾಗದೇ, ಸಂಪಾದನೆ ಇಲ್ಲದೇ, ನಮ್ಮನ್ನು ನಂಬಿಕೊಂಡ ಕುಟುಂಬಗಳು ಉಪವಾಸ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕಾರವು ಸೀಮೆಎಣ್ಣೆ ಸರಿಯಾಗಿ ಒದಗಿಸದೇ ಇರುವುದರಿಂದ ಮುಕ್ತ ಮಾರುಕಟ್ಟೆಯಲ್ಲಾದರೂ ಸೀಮೆಎಣ್ಣೆ ಖರೀದಿಸುವ ಎಂದರೆ ಅಲ್ಲಿಯೂ ಸೀಮೆಎಣ್ಣೆ ಸಿಗುತ್ತಿಲ್ಲ. ದೋಣಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಬೇಕಾದರೆ, ಔಟ್ ಬೋರ್ಡ್ ಇಂಜಿನ್ ಗೆ ಸೀಮೆಎಣ್ಣೆ ಬೇಕೇ ಬೇಕು. ಆದ್ದರಿಂದ ಸೀಮೆಎಣ್ಣೆ ಪರ್ಮಿಟ್ ಹೊಂದಿದ ಎಲ್ಲಾ ದೋಣಿಯವರಿಗೆ ತಲಾ 300 ಲೀಟರ್ ನಂತೆ ಪ್ರತಿ ತಿಂಗಳು ಸೀಮೆಎಣ್ಣೆ ಹಂಚಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಬಿ.ಜೆ.ಪಿ ಯವರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ (ಡಬ್ಬಲ್ ಇಂಜಿನ್ ಸರಕಾರ) ಇದ್ದರೆ ಮಿನುಗಾರಿಕೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಸಲಾಗುತ್ತದೆ. ಅಲ್ಲದೇ, ನಾಡದೋಣಿಯವರಿಗೆ 300 ಲೀಟರ್ ನವರೆಗೂ ಸೀಮೆಎಣ್ಣೆ ಒದಗಿಸುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದೀರಿ. ನಾವು ಮರುಳಾಗಿ, ಎಲ್ಲಾ ಮೀನುಗಾರರು ಕರಾವಳಿಯಲ್ಲಿ ನಿಮ್ಮ ಬಿ.ಜೆ.ಪಿ ಯ ಎಲ್ಲಾ ಶಾಸಕರನ್ನು ಆಯ್ಕೆ ಮಾಡಿದೆವು. ಕಳೆದ ಚುನಾವಣೆಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಬಿ.ಜೆ.ಪಿ ಗೆಲುವಿಗೆ ಈ ಮೀನುಗಾರರ ಪಾತ್ರ ಬಹಳ ಮುಖ್ಯವಾಗಿತ್ತು. ಆದರೆ, ನೀವು ಶಾಸಕಾದ ಮೇಲೆ ಮೀನುಗಾರರಿಗೆ ನೀಡಿದ ಆಶ್ವಾಸನೆ ಮಾತು ಘೋಷಣೆಯಾಗಿಯೇ ಉಳಿಯಿತು. ಈ ವರೆಗೂ 300 ಲೀಟರ್ ಸೀಮೆಎಣ್ಣೆ ನಿಮ್ಮ ಸರಕಾರದಿಂದ ಕೊಡಿಸಲು ಆಗಲಿಲ್ಲ. ನಾವು ಸೀಮೆಎಣ್ಣೆ ಬಗ್ಗೆ ನಮ್ಮ ಶಾಸಕರು, ಮೀನುಗಾರಿಕಾ ಮಂತ್ರಿಗಳ ಗಮನಕ್ಕೆ ತಂದಿರುತ್ತೇವೆ. ಆದರೆ ನಮ್ಮ ಬೇಡಿಕೆ ಈ ತನಕ ನೀವು ಈಡೇರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಒಂದು ವೇಳೆ ಶೀಘ್ರದಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಕರವಳಿಯ (ಕಾರವಾರದಿಂದ ಉಳ್ಳಾಲದ ತನಕ ) 3 ಜಿಲ್ಲೆಗಳ ಮೀನುಗಾರರು ಒಗ್ಗಟ್ಟಾಗುವಂತೆ ಕರೆಕೊಟ್ಟು ನಿಮ್ಮ ಬಿ.ಜೆ.ಪಿ ಯ ಶಾಸಕರನ್ನು ಆಯ್ಕೆ ಮಾಡದಂತೆ ತೀರ್ಮಾನ ಕೈಗೊಳ್ಳಬೇಕಾದಿತು ಎಂಬ ಸಂದೇಶವನ್ನು ನೀಡ ಬಯಸುತ್ತೇವೆ.

ನಮ್ಮ ಈ ಬೇಡಿಕೆಯನ್ನು ಶೀಘ್ರದಲ್ಲಿ ಈ ಈಡೇರಿಸಿ, ಕರಾವಳಿಯಲ್ಲಿ ಮೀನುಗಾರರು ಈಗ ಪ್ರತಿದಿನವೂ ಮೀನುಗಾರಿಕೆಯಲ್ಲಿ ಕರ್ಯನಿರತರಾಗುವ ಬಗ್ಗೆ ಅವಕಾಶ ಕಲ್ಪಿಸಿ, ಮೀನುಗಳ ಹಿಡುವಳಿ ಹೆಚ್ಚಾಗಿ ಎಲ್ಲಾ ಮೀನುಗಾರಿಕಾ ಬಂದರುಗಳಲ್ಲಿ ಮೀನುಗಾರಿಕೆ ನಂಬಿಕೊಂಡು ಬಂದ ಎಲ್ಲಾ ಜನರಿಗೂ ಕೆಲಸ ಸಿಕ್ಕಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ಕ್ರೀಯಶೀಲರಾಗಿ, ದುಡಿದು ಮೀನುಗಾರರ ಆರ್ಥಿಕ ಮಟ್ಟ ಸುಧಾರಿಸುವ ಬಗ್ಗೆ ಅವಕಾಶ ಕಲ್ಪಿಸಿಕೊಡುವಂತೆ ಬಿ. ನಾಗೇಶ್ ಖಾರ್ವಿ ಕೋರಿದ್ದಾರೆ.

Exit mobile version