Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು ಗ್ರಾಮವನ್ನು ಪ್ರಸ್ತಾವಿತ ಕೊಲ್ಲೂರು ಜಿ.ಪಂ. ಕ್ಷೇತ್ರಕ್ಕೆ ಸೇರಿಸಿದ್ದಕ್ಕೆ ಗ್ರಾಮಸ್ಥರ ವಿರೋಧ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪ್ರಸ್ತಾವಿತ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮ ಸೇರ್ಪಡೆಗೆ ಆಕ್ಷೇಪಿಸಿ ಬಿಜೂರು ಗ್ರಾಮಸ್ಥರು ಬೈಂದೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗ್ರಾಮ ಪಂಚಾಯತ್ ಸದಸ್ಯ ವಿರೇಂದ್ರ ಶೆಟ್ಟಿ ಮಾತನಾಡಿ, ಈಗಿನ ಪ್ರಸ್ತಾವಿತ ಸೀಮಾ ನಿರ್ಣಯ ಮಾಡುವಾಗ ತಾಲ್ಲೂಕಿನ ನಕ್ಷೆಯನ್ನು ನೋಡದೇ ಮಾಡಿದ ಹಾಗೇ ತೋರುತ್ತದೆ. ಬಿಜೂರು ಗ್ರಾಮವನ್ನು ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಅಥವಾ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಿದರೆ ಜನರಿಗೆ ಮತ್ತು ಮುಂದೆ ಆಯ್ಕೆಯಾಗಲಿರುವ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅನುಕೂಲವಾಗಲಿದೆ ಎಂದರು.

ಗ್ರಾಮಸ್ಥರಾದ ಶ್ರೀಧರ ಬಿಜೂರು ಮಾತನಾಡಿ, ಹೊಸದಾಗಿ ರಚನೆಗೊಂಡಿರುವ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮ ಪ್ರಸ್ತಾವಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮವು ಸುಮಾರು 52 ಕಿಲೋ ಮೀಟರ್ ದೂರವಿದ್ದು, ಅಲ್ಲಿಂದ ಬಿಜೂರು ಗ್ರಾಮಕ್ಕೆ ನೇರ ರಸ್ತೆ ಕೂಡ ಇರುವುದಿಲ್ಲ. ಮುಂದೆ ಕೊಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರು ಇಡೀ ಕ್ಷೇತ್ರದ ಸಂಪರ್ಕ ಇಟ್ಟುಕೊಳ್ಳಲು ತುಂಬಾ ಕಷ್ಟವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ರ ನೇರ ಸಂಪರ್ಕವಿರುವ ಗ್ರಾಮಗಳನ್ನು ಒಳಗೊಂಡ ಪ್ರಸ್ತಾವಿತ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೂರು ಗ್ರಾಮವನ್ನು ಸೇರಿಸುವುದು ಅಥವಾ ಶಿರೂರು ಗ್ರಾಮಕ್ಕೆ ಸೇರಿಸಿದರೆ ಅನುಕೂಲವಾಗಿದೆ ಎಂದರು.

ಈ ಸಂದರ್ಭ ಬಿಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ವಿ. ದೇವಾಡಿಗ, ಉಪಾಧ್ಯಕ್ಷೆ ಶ್ರೀಮತಿ, ಸದಸ್ಯರಾದ ರಾಜೇಂದ್ರ, ರಾಘವೇಂದ್ರ ಗಾಣಿಗ, ಗಂಗಾಧರ ದೇವಾಡಿಗ ತಿಪ್ಪನಡಿ, ಗಿರೀಶ್ ದೇವಾಡಿಗ ಸಾಲಿಮಕ್ಕಿ, ಮುಂಕಾಂಬಿಕ, ಅಶೋಕ ಪೂಜಾರಿ, ಶಾಂತ ದೇವಾಡಿಗ, ಸೀತಾ, ಲಕ್ಷ್ಮೀ, ಚಣ್ಣಮ್ಮ, ಮಾಜಿ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಜಯರಾಮ ಶೆಟ್ಟಿ ಬಿಜೂರು, ಜಯರಾಮ ಶೆಟ್ಟಿ ಗಂಟಿಹೊಳೆ, ಸುರೇಶ ಬಿಜೂರು, ರಾಜು ದೇವಾಡಿಗ, ಸುಂದರ್ ಉಪಸ್ಥಿತರಿದ್ದರು.

ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು.

Exit mobile version