Kundapra.com ಕುಂದಾಪ್ರ ಡಾಟ್ ಕಾಂ

ಜ.14ರಂದು ಏಕನಾ ಪ್ರೊಡಕ್ಷನ್ ತಂಡದ ‘ಹೇಯ್ ಲಡ್ಕಿ’ ಕನ್ನಡ ಮ್ಯೂಸಿಕಲ್ ವಿಡಿಯೋ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಏಕನಾ ಪ್ರೊಡಕ್ಷನ್ ನಿರ್ಮಾಣದ 5ನೇ ಪ್ರಾಜೆಕ್ಟ್ ‘ಹೇಯ್ ಲಡ್ಕಿ’ ಕನ್ನಡ ಮ್ಯೂಸಿಕಲ್ ವಿಡಿಯೋ ಸಾಂಗ್, ಮಕರ ಸಂಕ್ರಾತಿಯಂದು ಏಕನಾ ಪ್ರೊಡಕ್ಷನ್ಸ್ ಯುಟ್ಯೂಬ್ ಚಾನೆಲಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕಲಾವಿದ ಆರ್. ಪ್ರಹ್ಲಾದ್ ಆಚಾರ್ಯ ಹೇಳಿದರು.

ಕುಂದಾಪುರದಲ್ಲಿ ಗುರುವಾರ ಆಯೋಜಿಸಲಾದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೇಯ್ ಲಡ್ಕಿ’ ಎಂಬ ಕನ್ನಡ ಮ್ಯೂಸಿಕಲ್ ವಿಡಿಯೋ ಸಾಂಗನ್ನು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವುದು ವಿಶೇಷ. ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ ಆಲ್ಬಂ ಸಾಂಗ್ ಜ.14ರಂದು ಬಿಡುಗಡೆಗೊಳಿಸಲಿದ್ದಾರೆ. ಹಾಡಿನ ಸಂಗೀತ ನಿರ್ದೇಶನವನ್ನು ಗೌತಮ್ ಕೆ. ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣವನ್ನು ಸನತ್ ಉಪ್ಪುಂದ ನಿರ್ವಹಿಸಿರುತ್ತಾರೆ. ಸಂಕಲನ ತಕ್ಷಕ್ ಮಾಡಿದ್ದರೇ, ಸಾಹಿತ್ಯ, ನಿರ್ದೇಶನ ಹಾಗೂ ಮುಖ್ಯ ಪಾತ್ರವನ್ನು ಆರ್. ಪ್ರಹ್ಲಾದ್ ಆಚಾರ್ಯ ನಿರ್ವಹಿಸಿದ್ದಾರೆ. ನಾಯಕಿಯಾಗಿ ಚಿತ್ರಾ ಸೂರಜ್ ಆಚಾರ್ಯ ನಟಿಸಿದ್ದಾರೆ. ಆಲ್ಬಂ ಸಾಂಗನ್ನು ಮಂಜುನಾಥ ಸಾಲಿಯಾನ್ ತ್ರಾಸಿ, ಆರ್. ಪ್ರಹ್ಲಾದ್ ಆಚಾರ್ಯ ಹಾಗೂ ಗೌತಮ್ ಕೆ. ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಏಕನಾ ಪ್ರೊಡಕ್ಷನ್ಸ್ ತಂಡ ಈವರೆಗೆ ಆ ದಿನ ಸಂಡೆ, ನಿನ್ನ ರಾತ್ರಿ ನಾ ಎಣ್ಣೆ ಕುಡ್ದಿದ್ದೆ, ಸೈಕ್ ಸ್ಮೋಕಿಂಗ್, ಗುಡ್ನ ಎಂಬ ಆಲ್ಬಂ ಸಾಂಗ್ ನಿರ್ಮಿಸಿದ್ದು, ಎಲ್ಲದಕ್ಕೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದೇ ಪ್ರೋತ್ಸಾಹದಿಂದ ಇದೀಗ ಮತ್ತೊಂದು ಸಾಂಗ್ ನಿರ್ಮಿಸಿದ್ದೇವೆ. ನಾಲ್ಕೈದು ಲೊಕೇಷನಿನಲ್ಲಿ ಮೂರು ದಿನ ಶೂಟಿಂಗ್ ನಡೆದಿದೆ. ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಂಡಿದೆ ಎಂದರು.

ಸಂಗೀತ ನಿರ್ದೇಶಕ ಹಾಗೂ ಸಹ ನಿರ್ಮಾಪಕ ಗೌತಮ್ ಕೆ. ಮಾತನಾಡಿ, ತಮಾಷೆಯಲ್ಲಿ ಶುರುವಾದ ಮಾತುಕತೆ ಕೊನೆಗೆ ಹಾಡು ನಿರ್ಮಾಣದ ತನಕ ಬಂದು ನಿಂತಿದೆ. ರಾಜೇಶ್ ಕೃಷ್ಣನ್ ಅವರು ಹಾಡು ಕೇಳಿ ಖುಷಿಪಟ್ಟು ಹಾಡು ತಾವೇ ಹಾಡಲು ಒಪ್ಪಿಕೊಂಡರು. ಅದೇ ನಮಗೆ ಅದೊಂದು ದೊಡ್ಡ ಪ್ರೋತ್ಸಾಹ. ಆಲ್ಬಂ ಸಾಂಗ್ ಬಗ್ಗೆ ಹಿತೈಷಿಗಳಿಂದ ಒಳ್ಳೆಯ ಅಭಿಪ್ರಾಯವಿದೆ. ಯುಟ್ಯೂಬ್ ಚಾನೆಲ್ ಮುಖಾಂತರ ಎಲ್ಲರೂ ವೀಕ್ಷಿಸುವಂತೆ ವಿನಂತಿಸಿಕೊಂಡರು.

ಸಹ ನಿರ್ಮಾಪಕ ಮಂಜುನಾಥ ಸಾಲಿಯಾನ್ ತ್ರಾಸಿ, ಏಕನಾ ಪ್ರೊಡಕ್ಷನ್ಸ್ ತಂಡದಲ್ಲಿ ಪ್ರತಿಭಾವಂತ ಕಲಾವಿದರಿದ್ದು, ವಿವಿಧ ಆಲ್ಬಂ ಸಾಂಗ್ ಮೂಲಕ ಕಲಾರಸಿಕರ ಮನಗೆದ್ದಿದ್ದಾರೆ. ಪ್ರತಿಯೊಬ್ಬರೂ ಹವ್ಯಾಸವಾಗಿ ತೊಡಗಿಸಿಕೊಂಡರು ಉತ್ತಮ ಪ್ರಾಜೆಕ್ಟ್ ನಿರ್ಮಿಸುವಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇದು ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಆಲ್ಬಂ ಸಾಂಗ್ ಛಾಯಾಗ್ರಹಕ ಸನತ್ ಉಪ್ಪುಂದ, ಸಂಕಲನಕಾರ ತಕ್ಷಕ್, ಕಲಾವಿದರಾದ ಸತ್ಯನಾರಾಯಣ ಆಚಾರ್ ಬಸ್ರೂರು, ಪ್ರದೀಪ್ ಮಾರ್ಗೊಳ್ಳಿ ಉಪಸ್ಥಿತರಿದ್ದರು.

Exit mobile version