Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಜ.22ರಂದು ಮೊಗವೀರ ಭವನ ಉದ್ಘಾಟನೆ – ಡಾ. ಜಿ. ಶಂಕರ್ ಮಾಹಿತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ-1941) ಮುಂಬೈ, ಕುಂದಾಪುರ ಶಾಖೆ ನೇತೃತ್ವದಲ್ಲಿ ಸಮಾಜದ ಪ್ರತೀಕವಾಗಿ ಕುಂದಾಪುರದಲ್ಲಿ ಚಿಕನ್ಸಾಲ್ ರಸ್ತೆಯಲ್ಲಿ ಸುಮಾರು 10 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಭವನದ ನಿರ್ಮಾಣವಾಗಿದ್ದು, ಜ.22ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷ ನಾಡೋಜ ಡಾ| ಜಿ.ಶಂಕರ್ ಹೇಳಿದರು.

ಅವರು ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 60,000 ಚದರ ಅಡಿ ವಿಸ್ತಿರ್ಣದ ಕಟ್ಟಡ ವ್ಯವಸ್ಥಿತ ಮಾದರಿಯಲ್ಲಿ, ವಾಸ್ತು ವಿನ್ಯಾಸದೊಂದಿಗೆ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ಸಭಾಭವನ ಮೂರು ಮಹಡಿಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ , ಎರಡು ಲಿಪ್ಟ್ ವ್ಯವಸ್ಥೆ , 850 ಜನ ಸಾಮಾಥ್ರ್ಯದ ಸಭಾಂಗಣ , 450 ಜನ ಸಾಮಾಥ್ರ್ಯದ ಭೋಜನಾಲಯ, ಬಫೆಗೆ ಪ್ರತ್ಯೇಕ ಕೌಂಟರ್, ಸಸ್ಯಹಾರಿ – ಮಾಂಸಹಾರಿಗೆ ಪ್ರತ್ಯೇಕ ಅಡುಗೆಮನೆ, ಮಿನಿಹಾಲ್ ಸೌಲಭ್ಯವಿದೆ ಎಂದರು.

ಜನವರಿ 22ರಂದು ಮೊಗವೀರ ಭವನ ಉದ್ಘಾಟನೆ:
ಮೊಗವೀರ ಭವನ ಉದ್ಘಾಟನಾ ಸಮಾರಂಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷ ನಾಡೋಜ ಡಾ|ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಮಹಿಷಾಸುರಮರ್ದಿನಿ ಸಭಾಂಗಣವನ್ನು ಸಚಿವ ಎಸ್.ಅಂಗಾರ, ಇಂಧನ ಸಚಿವ ಸುನಿಲ್ ಕುಮಾರ್ ಅಮ್ಮ ಮಿನಿಹಾಲ್, ಸಂಸದ ಬಿ.ವೈ.ರಾಘವೇಂದ್ರ ಅನ್ನಪೂರ್ಣೇಶ್ವರಿ ಭೋಜನಾಲಯ ಉದ್ಘಾಟಿಸಲಿದ್ದಾರೆ.

ಕಛೇರಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಲಿಫ್ಟ್ ವ್ಯವಸ್ಥೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಾಕಶಾಲೆಯನ್ನು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಶ್ರೀಮತಿ ಶಾಲಿನಿ ಡಾ|ಜಿ.ಶಂಕರ್ ವೇದಿಕೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಉದ್ಯಮಿ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳು, ಉದ್ಯಮಿಗಳು, ಯುವ ಸಂಘಟನೆಯ ಅಧ್ಯಕ್ಷರುಗಳು ಆಗಮಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಿಗ್ಗೆ 9.30ರಿಂದ 10.15ರ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇವರಿಂದ ನೃತ್ಯ ಸಿಂಚನ, ಮಧ್ಯಾಹ್ನ 12.30ರಿಂದ 3ರ ತನಕ ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ ‘ಎಕ್ಸ್’ ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಕು|ಸಮೃದ್ಧಿ ಇವರಿಂದ ಯಕ್ಷ ನೃತ್ಯ, ಮಧ್ಯಾಹ್ನ 3 ಗಂಟೆಯಿಂದ ಕಾಂಚನಿ ಕಲಾಕೇಂದ್ರ ಮುಂಬೈ ಇವರ ಪ್ರಾಯೋಜಕತ್ವದಲ್ಲಿ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ದಾನಶೂರ ಕರ್ಣ’ ಪ್ರದರ್ಶನಗೊಳ್ಳಲಿದೆ. ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿಗಳಾದ ಆನಂದ ಸಿ ಕುಂದರ್, ಕೆ.ಕೆ.ಕಾಂಚನ್, ಮುಂಬೈಯ ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ್‌ಕುಮಾರ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ಕಾರ್ಯದರ್ಶಿ ಪ್ರಭಾಕರ್, ಕೋಶಾಧಿಕಾರಿ ಸುಧಾಕರ ಕಾಂಚನ್ ಉಪಸ್ಥಿತರಿದ್ದರು.

Exit mobile version