Kundapra.com ಕುಂದಾಪ್ರ ಡಾಟ್ ಕಾಂ

ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಾಗಾರವು ಕುಂದಾಪುರ ಜೆ.ಸಿ.ಐ ಸಹಭಾಗಿತ್ವದಲ್ಲಿ ಶಾಲಾ ವಠಾರದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಜಗದೀಶ್ ಜೋಗಿ ಅವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಆತಂಕವನ್ನು ದೂರಮಾಡುತ್ತಾ ಸಮಯವು ಅತ್ಯಂತ ಮಹತ್ವಪೂರ್ಣವಾಗಿದ್ದು, ಕಳೆದು ಹೋದ ಸಮಯ ಮರಳಿಬಾರದು, ಎನ್ನುವ ಕಟುಸತ್ಯವನ್ನು ಅರಿತು ಶಿಸ್ತುಬದ್ಧವಾದ ಅಧ್ಯಯನ ನಡೆಸಬೇಕೆಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ವೇಳಾಪಟ್ಟಿ ಹಾಕಿಕೊಂಡು ನಿರಂತರ ಓದುವುದು ಮತ್ತು ಓದಿದ ವಿಚಾರ ಹೆಚ್ಚು ಮನನ ಮಾಡಿಕೊಳ್ಳುವುದರಿಂದ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜೆ.ಸಿ.ಐ ಕುಂದಾಪುರ ಇದರ ಕಾರ್ಯದರ್ಶಿಗಳಾದ ಕಾರ್ತಿಕ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಜೆ.ಸಿ.ಐ ಕುಂದಾಪುರ ಇದರ ಅಧ್ಯಕ್ಷರಾದ ಸುಧಾಕರ್ ಕಾಂಚನ್ ಜೆ.ಸಿ.ಐ ನ ಸಮಾಜ ಸೇವೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಓದಿ ಹೆಚ್ಚು ಅಂಕಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಎಕ್ಸಲೆಂಟ್ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಸಂದೇಶ್ ಮಾತನಾಡುತ್ತಾ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಬೇಕು. ಒಮ್ಮೆ ಅಧ್ಯಯನಕ್ಕೆ ಕುಳಿತರೆ ಕನಿಷ್ಠ ಪಕ್ಷ ಒಂದು ಗಂಟೆಯ ಕಾಲ ವಿವೇಚನೆಯಿಂದ ಓದಿ ತದನಂತರ ಅದನ್ನು ಬರೆದು ಅಭ್ಯಾಸ ಮಾಡಿದಾಗ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.

ಮುಖ್ಯಶಿಕ್ಷಕಿಯಾದ ಸುರೇಖಾ ಆಚಾರ್ಯ ಸ್ವಾಗತಿಸಿ, ಸಮಾಜ-ವಿಜ್ಞಾನ ಶಿಕ್ಷಕಿಯಾದ ಪ್ರೇಮಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Exit mobile version