Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ‘ಮೊಗವೀರ ಭವನ’ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೊಗವೀರ ಸಮುದಾಯದಲ್ಲಿ ಜಾಗೃತಿಯನ್ನು ಬೆಳೆಸಿ, ಸಮುದಾಯ ಒಗ್ಗೂಡುವಂತೆ ಶ್ರಮಿಸುತ್ತಿರುವ ನಾಡೋಜ ಜಿ.ಶಂಕರ ಅವರ ನಾಯಕತ್ವವು ರಾಜಕೀಯ ನಾಯಕತ್ವದನ್ನು ಮೀರಿದ್ದಾಗಿದೆ. ಅವರ ಸೇವಾ ಪ್ರವೃತ್ತಿಯ ಕಾರಣದಿಂದ ಮೊಗವೀರ ಸಮುದಾಯ ಮುಂಚೂಣಿ ಸಾಧಿಸಲು ಸಾಧ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿ ಮುಂಬೈಯ ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ‘ಮೊಗವೀರ ಭವನ’ ವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ ಮೀನುಗಾರಿಕಾ ಸಚಿವನಾಗುವ ತನಕವೂ ಮೀನುಗಾರಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಿರಲಿಲ್ಲ. ಮೀನುಗಾರರ ಬಂಧುಗಳೊಂದಿಗಿನ ಒಡನಾಟದಿಂದ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು. ಮೀನುಗಾರರ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದ ಅವರು, ಶಿಕ್ಷಣ, ಕಲೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮೀನುಗಾರರು ಮುಂಚೂಣಿ ಸಾಧಿಸಿರುವ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಜಿ.ಶಂಕರ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಮೊಗವೀರ ಭವನದ ನಿರ್ಮಾಣದಲ್ಲಿ ಪ್ರತಿಯೊಬ್ಬ ಮೊಗವೀರ ಬಂಧುಗಳ ಬೆವರಿನ ಹನಿ ಇದೆ. ಭವನದಿಂದ ಬರುವ ಆದಾಯದಿಂದ ಶಿಕ್ಷಣ, ಆರೋಗ್ಯ ಹಾಗೂ ಗುರಿಕಾರರಿಗೆ ಗೌರವಧನ ನೀಡಲು ಯೋಜನೆ ಹಮ್ಮಿಕೊಳ್ಳಲಾಗುವುದು. ಭವನ ನಿರ್ಮಾಣಕ್ಕೆ ಅಂದಾಜು 8 ಕೋಟಿ ವೆಚ್ಚ ತಗುಲಿದ್ದು, ಸರ್ಕಾರದ ಅನುದಾನವನ್ನು ಕೊಡಿಸುವಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಪ್ರಯತ್ನವಿದೆ ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಪಾಕಶಾಲೆ ಉದ್ಘಾಟಿಸಿ ಮಾತನಾಡಿ, ದೇವರ ಮೇಲೆ ಭರವಸೆಯನ್ನು ಇಟ್ಟು ಸಮುದ್ರಕ್ಕೆ ತೆರಳುವ ಮೊಗವೀರ ಸಮಾಜ ಏಳಿಗೆಯಲ್ಲಿ ಜಿ. ಶಂಕರ ಅವರಂತಹ ಸಮರ್ಥರ ನಾಯಕರ ಕೊಡುಗೆ ದೊಡ್ಡದಿದೆ ಎಂದರು.

ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ಗೌರವಾಧ್ಯಕ್ಷ ಸುರೇಶ್ ಆರ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ದ.ಕ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಉದ್ಯಮಿ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹಿರಿಯಡಕ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ಅತಿಥಿಗಳಾಗಿದ್ದರು.

ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಮುಂಬೈ ಇದರ ಮಾಜಿ ಅಧ್ಯಕ್ಷರಾದ ರಮೇಶ ಬಂಗೇರ, ಮಹಾಬಲ ಎಂ.ಕುಂದರ್, ಎನ್.ಎಚ್ ಬಗ್ವಾಡಿ, ಎನ್.ಡಿ ಚಂದನ್, ಕರುಣಾಕರ ಜಿ.ಪುತ್ರನ್, ಎಂ.ವಿ.ಹೊಳ್ಮಗೆ, ನಾಗೇಶ್ ಎನ್.ಪುತ್ರನ್, ರತ್ನಾಕರ ಎನ್.ನಾಯ್ಕ್, ಮೊ.ಮ.ಸೇ.ಸಂ.ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಬಿ.ಹೆರಿಯಣ್ಣ, ಶಿವರಾಮ ಪುತ್ರನ್, ಬೀಜಾಡಿ ಮೀ.ಪ್ರಾ.ಸ.ಸಂಘದ ಅಧ್ಯಕ್ಷೆ ರತ್ನ ಮೊಗವೀರ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ.ನಾಯ್ಕ ಚಾತ್ರಬೆಟ್ಟು, ಬೈಂದೂರು ಘಟಕದ ಅಧ್ಯಕ್ಷ ರವಿರಾಜ ಚಂದನ್ ಕಳುವಾಡಿ, ಕುಂದಾಪುರ ಘಟಕದ ಅಧ್ಯಕ್ಷ ಚಂದ್ರಹಾಸ ಕೋಣಿ, ಹೆಮ್ಮಾಡಿ ಘಟಕದ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಹಾಲಾಡಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕುಂದಾಪುರ ಶಾಖಾ ಕಾರ್ಯದರ್ಶಿ ಪ್ರಭಾಕರ ಎನ್.ಮೊಗವೀರ, ಕೋಶಾಧಿಕಾರಿ ಸುಧಾಕರ ಕಾಂಚನ್ ಉಪಸ್ಥಿತರಿದ್ದರು.

ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿದರು. ಚಿನ್ಮಯ್ ಕಾಂಚನ್ ಬಟ್ಟೆಕುದ್ರು ಪ್ರಾರ್ಥನೆ ನೆರವೇರಿಸಿದರು. ಆರ್.ಜೆ ನಯನ ಕಾರ್ಯಕ್ರಮ ನಿರ್ವಹಿಸಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ. ನಾಯ್ಕ್ ವಂದಿಸಿದರು.

ಇದನ್ನೂ ಓದಿ: ► ಕುಂದಾಪುರದಲ್ಲಿ ಜ.22ರಂದು ಮೊಗವೀರ ಭವನ ಉದ್ಘಾಟನೆ – ಡಾ. ಜಿ. ಶಂಕರ್ ಮಾಹಿತಿ – https://kundapraa.com/?p=64535 .

ಸಾಂಸ್ಕೃತಿಕ ಕಾರ್ಯಕ್ರವಾಗಿ ಬೆಳಿಗ್ಗೆ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನಿರ್ದೇಶಕಿ ವಿದುಷಿ ಪ್ರವಿತಾ ಅಶೋಕ್ ಅವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ, ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ ‘ಎಕ್ಸ್’ ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಸಮೃದ್ಧಿಯ ಯಕ್ಷ ನೃತ್ಯ, ಮಧ್ಯಾಹ್ನ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ದಾನಶೂರ ಕರ್ಣ ಪ್ರದರ್ಶನಗೊಂಡಿತು.

Exit mobile version