ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಚಿತ್ತೂರು ಸಮೀಪ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ, ಮಹಿಳೆಯನ್ನು ಮನೆಗೆ ಡ್ರಾಪ್ ಮಾಡುವ ಮೂಲಕ ಸಚಿವ ಸುನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕಾ ಸುನಿಲ್ ಮಾನವೀಯತೆ ಮೆರೆದಿದ್ದಾರೆ.
ಕೊಲ್ಲೂರು ದೇವಸ್ಥಾನಕ್ಕೆ ಅಮವಾಸ್ಯೆ ಪೂಜೆಗೆ ತೆರಳಿ ಕಾರ್ಕಳಕ್ಕೆ ಹಿಂದಿರುಗುತ್ತಿದ್ದ ಸಚಿವ ಸುನಿಲ್ ಕುಮಾರ್ ಹಾಗೂ ಪತ್ನಿ ಪ್ರಿಯಾಂಕಾ ಅವರು, ಯಾವುದೋ ವಾಹನ ಡಿಕ್ಕಿಯಾಗಿ ಬೈಕಿನಿಂದ ಮಹಿಳೆಯೋರ್ವರು ಬಿದ್ದು ಗಾಯಗೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಸಚಿವರು ಕಾರು ನಿಲ್ಲಿಸಿ ಮಹಿಳೆ ಆರೋಗ್ಯ ವಿಚಾರಿಸಿದರೆ, ಪ್ರಿಯಾಂಕಾ ಅವರು ಮಹಿಳೆಗೆ ಪ್ರಥಮ ಚಿಕಿತ್ಸೆ ಮಾಡಿ ಚೇತರಿಸಿಕೊಂಡ ನಂತರ ಮಹಿಳೆ ಪೂರ್ವಾಪರ ವಿಚಾರಿಸಿದ್ದಾರೆ.
ಸುನಿಲ್ ಕುಮಾರ್ ಬೇರೆ ಕಾರ್ಯಕ್ರಮ ನಿಮಿತ್ತ ತಮ್ಮ ಪ್ರಯಾಣ ಮುಂದುವರಿಸಿದರೆ, ಅವರ ಪತ್ನಿ ಪ್ರಿಯಾಂಕಾ ಅವರು ಬೇರೊಂದು ಕಾರಿನಲ್ಲಿ ಗಾಯಗೊಂಡ ಮಹಿಳೆಯನ್ನು ಗಂಗೊಳ್ಳಿಯ ಅವರ ಮನೆಗೆ ಡ್ರಾಪ್ ಮಾಡಿ ಹೋಗಿದ್ದಾರೆ. ಪ್ರಿಯಾಂಕಾ ಗಾಯಗೊಂಡ ಮಹಿಳೆ ಉಪಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.