ಕುಂದಾಪುರ: ಇತ್ತಿಚಿನ ದಿನಗಳಲ್ಲಿ ಪತ್ರಿಕೆಯನ್ನು ಓದುವವರಿಗಿಂತ ಹೆಚ್ಚಾಗಿ ನೋಡುಗರ ಸಂಖ್ಯೆ ಜಾಸ್ತಿಗಾಗುತ್ತಿದೆ. ಮೊಬೈಲ್, ಟಿ.ವಿಯ ಕಾರಣದಿಂದಾಗಿ ಯುವಜನತೆ ಪತ್ರಿಕೆ ಓದುವ ಹವ್ಯಾಸದಿಂದಲೇ ದೂರ ಸರಿಯುತ್ತಿದ್ದಾರೇನೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂದು ಸುದ್ದಿಮನೆ ವಾರಪತ್ರಿಕೆಯ ಸಂಪಾದಕ ಸಂತೋಷ ಕೋಣಿ ಆತಂಕ ವ್ಯಕ್ತಪಡಿಸಿದರು.
ಅವರು ಮೇಲ್‌ಕಟ್ಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಜರುಗಿದ ಬಸ್ರೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮ ಮತ್ತು ಯುವಜನತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರತಿದಿನವೂ ಪತ್ರಿಕೆಯನ್ನು ಓದಿ ಆಲೋಕಿಸುವ, ಸತ್ಯ-ಅಸತ್ಯಗಳನ್ನು ವಿಚಾರ ಮಾಡುವ ಕೆಲಸ ಮಾಡಿದರೇ ನಮಗೆ ಗೊತ್ತಿಲ್ಲದೇ ನಮ್ಮಲ್ಲೊಬ್ಬ ವಿಮರ್ಷಕ ಹುಟ್ಟಿಕೊಳ್ಳುತ್ತಾನೆ ಜೊತೆಗೆ ನಮ್ಮ ವಿವೇಕವೂ ಬೆಳೆಯುತ್ತದೆ ಎಂದ ಅವರು ಯುವಜನತೆ ಪತ್ರಿಕೋದ್ಯಮದ ಅಂಕುಡೊಂಕುಗಳನ್ನು ಅವಲೋಕಿಸುವುದರೊಂದಿಗೆ ಒಳಿತನ್ನು ಪ್ರಶಂಶಿಸುವ, ಕೆಡುಕನ್ನು ಪ್ರಶ್ನಿಸುವ ಜಾಗೃತ ಮನಸ್ಥಿತಿಯನ್ನು ಬೆಳೆಸಿಕೊಳ್ಳವುದು ಇಂದಿನ ಅಗತ್ಯವಾಗಿದೆ ಎಂದರು.
ಕಾಳಾವಾರ ಗ್ರಾ.ಪಂ ಸದಸ್ಯ ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಶೆಟ್ಟಿ, ಮೇಲ್‌ಕಟ್ಕೆರೆ ಸ.ಹಿ.ಪ್ರಾ. ಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗಣಪತಿ ಶೇಟ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಪಾಂಡುರಂಗ ಪ್ರಾಸ್ತಾವಿಕ ಮಾತುಗಳನ್ನಡಿದರು. ಶಿಬಿರಾರ್ಥಿ ರಿನಿಷಾ ಸ್ವಾಗತಿಸಿದರು, ಹನುಮಂತ ಧನ್ಯವಾದಗೈದರು.