Site icon Kundapra.com ಕುಂದಾಪ್ರ ಡಾಟ್ ಕಾಂ

ಜ.29ರಂದು ನಡೆಯುವ ‘ಬೃಹತ್ ಕ್ಷತ್ರಿಯ ಸಮಾವೇಶ’ಕ್ಕೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಬೆಂಬಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜ.18:
ಕರ್ನಾಟಕ ಕ್ಷತ್ರಿಯ ಒಕ್ಕೂಟದ ನೇತೃತ್ವದಲ್ಲಿ ಜನವರಿ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಕ್ಷತ್ರಿಯ ಸಮಾವೇಶಕ್ಕೆ ರಾಮಕ್ಷತ್ರಿಯ ಸಮುದಾಯ ಸೇರಿದಂತೆ ಸುಮಾರು 38 ಕ್ಷತ್ರಿಯ ಒಳಪಂಗಡಗಳು ಬೆಂಬಲ ನೀಡಿವೆ.

ಮರಾಠ ಕ್ಷತ್ರಿಯ, ರಾಜ್ಯ ಕ್ಷತ್ರಿಯ, ಹಿಂದೂ ಕ್ಷತ್ರಿಯ, ರಾಮಕ್ಷತ್ರಿಯ ಹೀಗೆ ಹಲವಾರು ಪಂಗಡಗಳಿದ್ದು, ಕ್ಷತ್ರಿಯ ಸಮುದಾಯ ಒಗ್ಗಟ್ಟು ಕ್ಷೀಣವಾಗಿದೆ. ಬೃಹತ್ ಸಮಾವೇಶದ ಮೂಲಕ ಕ್ಷತ್ರಿಯ ಸಮುದಾಯದ ಕೂಗನ್ನು ಸರಕಾರಕ್ಕೆ ಮುಟ್ಟಿಸುವ ಉದ್ದೇಶ ಹೊಂದಲಾಗಿದೆ. ಕ್ಷತ್ರಿಯ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾಮುಖ್ಯತೆನ್ನು ಸಮಾವೇಶದ ಮೂಲಕ ಮುಂದಿಡಲು ತೀರ್ಮಾನಿಸಲಾಗಿದೆ. ಕ್ಷತ್ರಿಯ ಸಮುದಾಯದ ಉಪಪಂಗಡಗಳ ಪ್ರಮುಖ ಬೇಡಿಕೆಯನ್ನು, ಆಯಾ ಸಮುದಾಯದ ನಾಯಕರೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಮನವಿ ಹಾಗೂ ಹತ್ಕೋತ್ತಾಯವನ್ನು ಸಮಾವೇಶದಲ್ಲಿ ಭಾಗವಹಿಸುವ ರಾಷ್ಟ್ರೀಯ ನಾಯಕರಿಗೆ ಸಲ್ಲಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ.

ವಿಶ್ವ ರಾಮ ಕ್ಷತ್ರಿಯ ಮಹಾಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರು ಮತ್ತು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ಅವರ ನೇತೃತ್ವದಲ್ಲಿ ಸಭೆ ಸೇರಿ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು. ಅಲ್ಲದೆ ಬೇರೆ ಬೇರೆ ಕಡೆಗಳಿಂದ ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಅಲ್ಲದೇ ಸಮಾವೇಶಕ್ಕೆ ಶ್ರೀ ರಾಮಕ್ಷತ್ರಿಯ ಸಮಾಜದ ವತಿಯಿಂದ ರೂ.5 ಲಕ್ಷ ಹಾಗೂ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರು ರೂ.1 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಸಭೆಯಲ್ಲಿ ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಉಪಾಧ್ಯಕ್ಷ ಕೆ. ನಾಗರಾಜ್ ಕಾಮಧೇನು, ಅಶೋಕ್ ಕುಮಾರ್ ಬಾಡ, ಬೆಂಗಳೂರಿನ ಉದ್ಯಮಿ ರಾಘವೇಂದ್ರ ರಾವ್, ಸಂಘಟನ ಕಾರ್ಯದರ್ಶಿ ಸುರೇಶ್ ಪ್ರಧಾನ ಕಾರ್ಯದರ್ಶಿ ಬಿಜೂರ್, ಶ್ರೀಧರ್ ಪಿ. ಎಸ್., ಬೆಂಗಳೂರು ಸಂಘದ ಅಧ್ಯಕ್ಷ ಮಹಾಬಲೇಶ್ವರ್, ಕಾನೂನು ಸಲಹೆಗಾರ ಕರುಣಾಕರ್, ಲೆಕ್ಕಪರಿಶೋಧಕ ಗಣಪತಿ ಹುಬ್ಬಳ್ಳಿ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಪದಾಧಿಕಾರಿಗಳಾದ ಶ್ರೀನಿವಾಸ್ ಹೆಬ್ರಿ, ರವೀಂದ್ರ ಗಂಗೊಳ್ಳಿ ಪ್ರವೀಣ್ ಹೊಸನಗರ, ನಾಗೇಶ್ ಕೆ.ಜಿ., ಗಂಗಾಧರ್ ನಾಯಕ್ ಮಂಕಿ, ಶಂಕರ್ ಕುಂದಾಪುರ, ಸುಬ್ರಹ್ಮಣ್ಯ ಹೋಬಳಿದಾರ್ ಉಪಸ್ಥಿತರಿದ್ದರು.

Exit mobile version