Kundapra.com ಕುಂದಾಪ್ರ ಡಾಟ್ ಕಾಂ

ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ – ಸುವರ್ಣ ಸಂಭ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವ್ಯಕ್ತಿಯಲ್ಲಿ ಉತ್ತಮ ಚಿಂತನೆ ಮತ್ತು ಒಳ್ಳೆಯ ವ್ಯಕ್ತಿತ್ವ ಬರಬೇಕಾದರೆ ಶಿಕ್ಷಣ ಮುಖ್ಯ ಅದಕ್ಕಾಗಿ ಸರಕಾರ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಶ್ರಮಿಸಲಾಗುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಬೈಂದೂರು ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮ-೨೦೨೩ ಸಮಾರಂಭದಲ್ಲಿ ’ಅನ್ನ ಬ್ರಹ್ಮ’ ಸಭಾಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಳೆದ ೫೦ ವರ್ಷದ ಹಿಂದೆ ನಮ್ಮ ಸಂಸ್ಥೆಯ ಸುಪರ್ದಿಗೆ ಪಡೆದುಕೊಂಡು ಈ ಶಾಲೆಯಲ್ಲಿ ಪ್ರಸ್ತುತ ಉಡುಪಿ ಜಿಲ್ಲೆಯ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂದೆನಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಶ್ರಮಿಸಿದ ಶಿಕ್ಷಕರು, ಪಾಲಕರು ಹಾಗೂ ಸಹಕರಿಸಿದ ಸರ್ವರೂ ಅಭಿನಂಧನಾರ್ಹರು ಎಂದು ಶ್ಲಾಘಿಸಿದರು.

ಭಾಷೆ ಬರೀ ಸಂವನಕ್ಕೆ ಎಂಬ ಮನೋಭಾವ ಶ್ರೀಮಂತ ವರ್ಗದಲ್ಲಿ ಹೆಚ್ಚುತ್ತಿದೆ. ಭಾಷೆ ಹೆತ್ತವರಂತೆ ನಮ್ಮನ್ನು ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಮಾತೃಭಾಷೆಯ ಕೀಳರಿಮೆ ಸಲ್ಲದು. ಇಂಗ್ಲೀಷ್, ಎಲ್ಲಾ ಭಾಷೆಗಳನ್ನು ತನ್ದಾಗಿಸಿಕೊಂಡು ತಾನೂ ಬೆಳೆಯುವಂತೆ ಕನ್ನಡಕ್ಕೂ ಈ ಶಕ್ತಿ ಬರಬೇಕು. ಈ ನೆಲೆಯಲ್ಲಿ ಬಾಲ್ಯದಿಂದಲೇ ಮಕ್ಕಳು ನೈತಿಕ ಶಿಕ್ಷಣ ಪಡೆಯಬೇಕಾದರೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಮುಂದುವರಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಬೇಕು. ಇದು ನಮ್ಮೆಲ್ಲರ ಮೊದಲ ಕರ್ತವ್ಯವೂ ಹೌದು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ರಾಜು ಎಸ್., ಸುವರ್ಣ ಸಂಭ್ರಮ ಸಮಿತಿ ವತಿಯಿಂದ ಹಾಗೂ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಖಾವಂದರನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು

ಮಾಜಿ ಶಾಸಕ ಕೆ. ಗೋಪಾ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕೆರಾಡಿ, ಶಿಕ್ಷಣಾಧಿಕಾರಿ ಮಂಜುನಾಥ್ ಜಿ. ಎಂ., ಉದ್ಯಮಿಗಳಾದ ಯು. ಬಿ. ಶೆಟ್ಟಿ, ವೆಂಕಟೇಶ ಬಿಜೂರು, ನಾಗರಾಜ ಶೇಟ್, ಬಾಬು ಪೂಜಾರಿ ಕಿರುಕಿ, ಎಚ್. ಶೇಷ ಶೇರುಗಾರ, ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಗೋವಿಂದ ಬಾಬು ಪೂಜಾರಿ, ಕರ್ನಲ್ ನರಸಿಂಹ ನಾಯ್ಕ್, ಉತ್ಸವ ಸಮಿತಿ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ, ಆರ್ಥಿಕ ಸಮಿತಿ ಅಧ್ಯಕ್ಷ ಕೃಷ್ಣಯ್ಯ ವಿ. ಮದ್ದೋಡಿ, ಎಸ್‌ಡಿಎಂಸಿ ಅಧ್ಯಕ್ಷ ಸುಭೋದ್ ಹಾರ್ವೇ, ವಿದ್ಯಾರ್ಥಿ ನಾಯಕ ಬಿ. ನರೇಂದ್ರ ನಾಯ್ಕ್ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸುಬ್ರಮಣ್ಯ ಹೆಬ್ಬಾಗಿಲು ಸೃಷ್ಟಿವಾಚನಗೈದರು. ಮುಖ್ಯ ಶಿಕ್ಷಕ ರಾಜು ಎಸ್. ಸ್ವಾಗತಿಸಿದರು. ಆನಂದ ಮದ್ದೂಡಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version