Kundapra.com ಕುಂದಾಪ್ರ ಡಾಟ್ ಕಾಂ

ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ಪ್ರತಿಯೊಂದು ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಪ್ರೀತಿ, ವಿಶ್ವಾಸ, ಸಹಬಾಳ್ವೆಯ ಬದುಕು ಸಂಘಟನೆಗಳ ಧ್ಯೇಯವಾಗಬೇಕು. ಸಂಘಟಿತರಾಗಿ ಬಾಳುವುದರಿಂದ ಸಮಾಜದ ಏಳಿಗೆ ಸಾಧಿಸಬಹುದು ಎಂದು ಮಹಿಳಾ ಸಂರಕ್ಷಣಾ ಸಮಿತಿ ಮತ್ತು ರಾಜ್ಯ ಪ್ರಜಾತತ್ವ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ ಪ್ರೇಮಾ ರಾಮಮೂರ್ತಿ ಹೇಳಿದರು.

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ನೂತನ ಅಸ್ತಿತ್ವದ ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣದಿಂದ ಸ್ವಾವಲಂಬಿ ಜೀವನ ಸಾಧ್ಯ. ಸಮಾಜಮುಖಿ ವ್ಯಕ್ತಿತ್ವದೊಂದಿಗೆ ಮಾನವೀಯ ಗುಣದಿಂದ ಸಂಸ್ಕೃತಿ ರಕ್ಷಣೆ ಮಾಡಬಹುದು. ಮಹಿಳೆಯರು ಸಮಾಜ ಸೇವೆ ಮಾಡುವುದರ ಮೂಲಕ ಸಮಷ್ಠಿಯ ಹಿತ ಕಾಪಾಡುವ ಜವಾಬ್ದಾರಿಯ ಜ್ಞಾನ ಬೆಳೆಯುತ್ತದೆ ಎಂದರು.

ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಮೋಹನ ಸುಬ್ರಾಯ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. 2021-22ನೇ ಸಾಲಿನ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಾಧ್ಯಕ್ಷೆ ಪ್ರೇಮಾ ರಾಮಮೂರ್ತಿ ಇವರನ್ನು ಸನ್ಮಾನಿಸಲಾಯಿತು.

ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ನೂತನ ಅಧ್ಯಕ್ಷೆ ವಿದ್ಯಾ ಅಶೋಕ ಶೇಟ್, ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ. ರವೀಂದ್ರ ಶೇಟ್, ಮಂಗಳೂರು ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಕೃಷ್ಣಾನಂದ ಶೇಟ್, ಬಡಾಕೆರೆ ಜ್ಞಾನೇಶ್ವರಿ ಮಹಾಮಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಲೋಚನಾ ಚಂದ್ರ ಶೇಟ್, ಕುಂದಾಪುರ ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಜಯಶ್ರೀ ಎನ್. ಶೇಟ್, ಭಟ್ಕಳ ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಪರಿಮಳ ರಾಜಶೇಖರ್ ಶೇಟ್ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ರೂಪ ರೇವಣಕರ್ ಪ್ರಾರ್ಥಿಸಿದರು. ನೂತನ ಕಾರ್ಯದರ್ಶೀ ಕವಿತಾ ಎನ್. ಶೇಟ್ ವಂದಿಸಿದರು. ನರೇಂದ್ರ ಶೇಟ್ ನಿರೂಪಿಸಿದರು.

Exit mobile version