ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉಪ ಕಲಾತ್ಮಕ ನಿರ್ದೇಶಕ (ಡೆಪ್ಯುಟಿ ಆರ್ಟಿಸ್ಟಿಕ್ ಡೈರೆಕ್ಟರ್)ರನ್ನಾಗಿ ಡಾ. ಪ್ರದೀಪ ಕುಮಾರ ಶೆಟ್ಟಿ ಕೆಂಚನೂರು ಇವರನ್ನು ಕರ್ನಾಟಕ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಉತ್ಸವವನ್ನು ಮಾರ್ಚ್ 16ರಿಂದ 23ರ ವರೆಗೆ ಬೆಂಗಳೂರಿನ ಒರಿಯನ್ ಮಾಲ್ನಲ್ಲಿರುವ ಪಿ.ವಿ.ಆರ್ನಲ್ಲಿ ಸಂಘಟಿಸಲಿದೆ. ಪ್ಯಾರಿಸ್ನಲ್ಲಿರುವ FIAP ಸಂಸ್ಥೆಯು ಮನ್ನಿಸಿರುವ ಭಾರತದ 5 ಫಿಲಂ ಫೆಸ್ಟಿವಲ್ನಲ್ಲಿ ಒಂದಾಗಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು (ಬಿಫೆಸ್) ಅಂತರಾಷ್ಟ್ರೀಯ ಮನ್ನಣೆಯನ್ನು ಹೊಂದಿರುವ ಕೆಲವೇ ಕೆಲವು ಮುಖ್ಯ ಫೆಸ್ಟಿವಲ್ಗಳಲ್ಲಿ ಒಂದಾಗಿದೆ.
ಪುಣೆಯ ಫಿಲಂ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನಲ್ಲಿ ಅಪ್ರಿಸಿಶಿಯೇಶನ್ (ಸಿನೆಮಾ ರಸಗ್ರಹಣ) ಮತ್ತು ಕೊಲ್ಕತ್ತಾದ ಸತ್ಯಜಿತ್ ರೇ ಫಿಲಂ ಇನ್ಸ್ಟಿಟ್ಯೂಟ್ನಿಂದ ಸೌಂಡ್ ಅಥವಾ ಶಬ್ದಗ್ರಹಣದಲ್ಲಿ ತರಬೇತಿ ಹೊಂದಿರುವ ಪ್ರದೀಪ ಅವರು ಅಹ್ಮದಾಬಾದಿನಲ್ಲಿರುವ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಎನ್.ಐ.ಡಿ., ಆರ್.ವಿ. ವಿಶ್ವವಿದ್ಯಾಲಯ, ಮಣಿಪಾಲ ವಿಶ್ವವಿದ್ಯಾಲಯ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಅಧ್ಯಯನದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಸಿನಿಮಾ ಅಧ್ಯಯನದಲ್ಲಿ ಪಿ.ಹೆಚ್.ಡಿ. ಹೊಂದಿರುವ ಪ್ರದೀಪ್ ವಿಶ್ವ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಕುರಿತಂತೆ ಒಟ್ಟು ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2016ರಲ್ಲಿ ರಾಷ್ಟ್ರಪತಿಗಳ ಬೆಳ್ಳಿ ಪದಕ (ರಜತ ಕಮಲ) ಪ್ರಶಸ್ತಿ ಪಡೆದ ಗುಲ್ವಾಡಿ ಟಾಕೀಸ್ ನಿರ್ಮಾಣದ ” ರಿಸರ್ವೇಶನ್ “ಸಿನಿಮಾದ ಚಿತ್ರಕಥೆಯ ಲೇಖಕರೂ ಆಗಿದ್ದಾರೆ. ನಿಟ್ಟೆ ಯುನಿವರ್ಸಿಟಿ ಮತ್ತು ಸುರತ್ಕಲ್ನ ಎನ್.ಐ.ಟಿ.ಕೆಯ ಫಿಲ್ಮ್ ಫೆಸ್ಟಿವಲ್ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಚರಿತ್ರೆ ಹಾಗೂ ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು 2018ರಲ್ಲಿ ಕೇಂದ್ರ ಸರ್ಕಾರದ ಸಂಸ್ಥೆ ICHRನ ಫೆಲೋ ಆಗಿ ಕೂಡಾ ಆಯ್ಕೆಯಾಗಿದ್ದರು.