Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎಂಟನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- ೨೦೨೩ ಪ್ರದಾನ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು.

ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರ ಪ್ರಾರ್ಥನೆಯೊಂದಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು.

ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ್ ಕುಮಾರ್ ಕಲ್ಕೂರ್, ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇವರು ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -೨೦೨೩ ನ್ನು ಹಿರಿಯ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಇವರಿಗೆ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕ, ಯುಗ ಪುರುಷ ಮಾಸ ಪತ್ರಿಕೆ, ಕಿನ್ನಿಗೋಳಿ, ಆನಂದರಾಮ ಐತಾಳ್ ಉಪ್ಪಿನಕುದ್ರು, ಅಧೀಕ್ಷಕ ಅಭಿಯಂತರರು, ಜನಾರ್ಧನ ಹಂದೆ, ಬ್ಯಾಂಕ್ ಅಧಿಕಾರಿ (ನಿವೃತ್ತ), ಮಂಗಳೂರು, ನಾಗೇಶ್ ಶ್ಯಾನುಭಾಗ್, ನಿವೃತ್ತ ಮುಖ್ಯೋಪಾಧ್ಯಾಯರು, ಬಂಟ್ವಾಡಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಹರಿಕೃಷ್ಣ ಪುನರೂರು ರವರನ್ನು ಸನ್ಮಾನಿಸಲಾಯಿತು. ನಂತರ ಯಕ್ಷಗಾನದ ಹಿರಿಯ ಚಂಡೆ ಕಲಾವಿದ ಸದಾನಂದ ಪ್ರಭು ಏಳ್‌ಜಿತ್, ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಚಂಡೆ ಕಲಾವಿದ ಶಂಕರ(ಕುಮಾರ) ಮೊಗವೀರ, ವೈಟ್ ಲಿಫ್ಟರ್ ಶಿಶಿರ ಪೂಜಾರಿ ಇವರನ್ನೂ ಸಹ ಸನ್ಮಾನಿಸಲಾಯಿತು. ಯಕ್ಷಗಾನ ಭಾಗವತರಾದ ದೇವರಾಜ್ ರವರಿಗೆ ವೈದ್ಯಕೀಯ ನೆರವು ಮತ್ತು ಪ್ರಥಮ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಶ್ರೀರಕ್ಷಾ, ಸಬ್ಲಾಡಿ ಇವಳಿಗೆ ಅಕಾಡೆಮಿಯ ವತಿಯಿಂದ ವಿದ್ಯಾರ್ಥಿವೇತನ ಶಿರೂರು ಫಣಿಗಿರಿ ಟ್ರಸ್ಟ್ ನ ಮುಖ್ಯಸ್ಥ ಉಮೇಶ್ ಶಿರೂರು ರವರ ಮೂಲಕ ನೀಡಲಾಯಿತು. ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅರ್ಹತಾ ಪತ್ರ ಹಾಗೂ ಬಹುಮಾನ ನೀಡಲಾಯಿತು.

ಮನೋರಂಜನಾ ಕಾರ್ಯಕ್ರಮವಾಗಿ ಭಾಸ್ಕರ್ ಕೊಗ್ಗ ಕಾಮತ್ ರವರು ಜಿಮ್ನಾಸ್ಟಿಕ್ ಗೊಂಬೆಯಿಂದ ಜಿಮ್ನಾಸ್ಟಿಕ್ ಪ್ರದರ್ಶನ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ತಂಡದಿಂದ ಯಕ್ಷಗಾನದ ಪದ್ಯಗಳು ಕಿಕ್ಕಿರಿದು ನೆರೆದ ಜನರ ಹೃನ್ಮನ ತಣಿಸಿತು. ತದನಂತರ ಊರ ಪರವೂರ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ನೃತ್ಯಗಳು ಮತ್ತು ಸಂಗೀತ ನೆರೆದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಮತ್ತು ರಾಜೇಂದ್ರ ಪೈ ಯವರು ಕಾರ್ಯಕ್ರಮ ನಿರ್ವಹಿಸಿದರು. ಉದಯ ಭಂಡಾರ್‌ಕಾರ್ ರವರು ಧನ್ಯವಾದ ಸಲ್ಲಿಸಿದರು.

Exit mobile version