ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಫೆ.19ರಂದು ನಡೆಯಲಿರುವ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜರಗಿತು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ ಕಾಮತ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ ಪುತ್ರನ್ ಮಾತನಾಡಿ, ಗಂಗೊಳ್ಳಿಯಲ್ಲಿ ನಡೆಯಲಿರುವ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳು ನಡೆದಿದ್ದು, ಸಮ್ಮೇಳನದ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿ ಸದಸ್ಯರು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿ ದುಡಿಯುತ್ತಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸಮ್ಮೇಳನದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ವಿವಿಧ ಸಮಿತಿಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಸಮ್ಮೇಳನದ ಕಾರ್ಯದರ್ಶಿ ಯು. ಎಸ್. ಶೆಣೈ, ಕುಂದಾಪುರ ತಾಲೂಕು ಕಸಾಪ ಕೋಶಾಧಿಕಾರಿ ಕೆ. ಎಸ್. ಮಂಜುನಾಥ, ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ವಿವಿಧ ಶಾಲೆಗಳ ಶಿಕ್ಷಕರು, ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.