Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬೈಕ್‌ಗೆ ಪಿಕಪ್ ಡಿಕ್ಕಿ. ಬೈಕ್ ಸವಾರ ಸ್ಥಳದಲ್ಲೇ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.14:
ತಾಲೂಕಿನ ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ್‌ ಮೇಲ್‌ಜಡ್ಡು ಸಮೀಪ ಪಿಕಪ್ ವಾಹನ ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಹಾರ್ಮಣ್ ನಿವಾಸಿ ಪ್ರಜ್ವಲ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.

ಪ್ರಜ್ವಲ್ ಶೆಟ್ಟಿ ಬೇರೆಯವರ ತೋಟದ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ‌ಸೋಮವಾರ ಸಂಜೆ ಸುಮಾರು 5 ಗಂಟೆಗೆ ತೋಟದ ಕೆಲಸ ಮುಗಿಸಿ ತನ್ನ ಶೈನ್ ಬೈಕಿನಲ್ಲಿ ಹಾರ್ಮಣ್ ಕಡೆಗೆ ಪ್ರಯಾಣಿಸುತ್ತಿದ್ದ. ಇದೇ ಸಂದರ್ಭ ಯತೀಶ್ ಎಂಬಾತ ಪಿಕಪ್ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ್‌ ಮೇಲ್‌ಜಡ್ಡು ಸಮೀಪ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಪ್ರಜ್ವಲ್ ಶೆಟ್ಟಿಯ ಹೆಲ್ಮೆಟ್ ಹಾರಿ ಹೋಗಿದ್ದು, ತಲೆ ರಸ್ತೆಗಪ್ಪಳಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳೀಯರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version