Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು
: ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದಾನಿಗಳಾದ ಉದ್ಯಮಿ ಸುನಿಲ್ ಆರ್. ಶೆಟ್ಟಿ ಬೆಂಗಳೂರು ಇವರು ಕೊಡುಗೆಯಾಗಿ ನೀಡಿರುವ ನೂತನ ಬ್ರಹ್ಮರಥವು ಬುಧವಾರ ರಾತ್ರಿ ಪುರಪ್ರವೇಶಗೊಂಡಿತು. ನಂತರ ದೇವಳದ ಹೊರಪ್ರಾಂಗಣದಲ್ಲಿ ತಂತ್ರಿ ಹಾಗೂ ಪ್ರಧಾನ ಅರ್ಚಕ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ವಾಸ್ತು ರಾಕ್ಷೋಘ್ನಹೋಮ ಹಾಗೂ ಸುದರ್ಶನ ಯಾಗ ನೆರವೇರಿಸಲಾಯಿತು.

ಗುರುವಾರ ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಆರಂಬಿಸಲಾದ ಧಾರ್ಮಿಕ ಕಾರ್ಯಗಳು ಕ್ರಮವಾಗಿ ರಜ್ಜು ಬಂಧನ, ಹಳೆ ರಥದ ಕಲೆಯನ್ನಿಳಿಸಿ ಹೊಸ ರಥಕ್ಕೆ ಕಲಾ ಸಂಕೋಚ ನೀಡಲಾಯಿತು. ಪಂಚಕಲಾಸಂಕೋಚ ಹೋಮ, ನಂತರ ಅಭಿಷೇಕ, ನೂತನ ರಥದ ಪೀಠಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12-15ಕ್ಕೆ ದಾನಿಗಳು ನೂತನ ರಥವನ್ನು ದೇವಳಕ್ಕೆ ಹಸ್ತಾಂತರಿಸಿ ಲೋಕಾರ್ಪಣೆ ಮಾಡಿದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಹಾಗೂ ಕೊಲ್ಲೂರು ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವೀಣಾ ಬಿ. ಎಂ., ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಜಿ ಶಾಸಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೆ. ಗೋಪಾಲ ಪೂಜಾರಿ, ಸುನಿಲ್ ಆರ್. ಶೆಟ್ಟಿ ಮಕ್ಕಳಾದ ಅನ್‌ಮೋಲ್ ಶೆಟ್ಟಿ, ಆಂಚಲ್ ಶೆಟ್ಟಿ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಶಿಲ್ಪಿ ರಾಜಗೋಪಾಲ ಆಚಾರ್ಯ ಮೊದಲಾದವರು ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾದರು.

ಬುಧವಾರ ಬೆಳಿಗ್ಗೆ ಕುಂಭಾಶಿಯಿಂದ ಬ್ರಹ್ಮರಥವನ್ನು ಹೊತ್ತು ಹೊರಟ ವಾಹನ ಸಂಜೆ 5:30ಕ್ಕೆ ಕೊಲ್ಲೂರು ಮುಖಮಂಟಪದ ಹತ್ತಿರ ತಲುಪಿತಾದರೂ ಕೊಲ್ಲೂರು ಪುರಪ್ರವೇಶವಾಗಲು ಸಾಧ್ಯವಾಗಲಿಲ್ಲ. ಕಾರಣ ನೂತನ ರಥದ ಗಾಲಿಗಳಿಗೆ ಕೀಲು ಹಾಕುವ ಭಾಗವು ಹೊರಬಂದಿರುವುದರರಿಂದ ಮುಖಮಂಟಪದ ಒಳಗೆ ಹೋಗುವುದು ಕಷ್ಟವಾಯಿತು. ನಂತರ ಜೆಸಿಬಿ ಮತ್ತು ಹಿಟಾಚಿಯನ್ನು ಬಳಸಿ ಸ್ವಾಗತ ಗೋಪುರದ ಪಕ್ಕದಲ್ಲಿ ಹೊಸ ರಸ್ತೆ ನಿರ್ಮಿಸಿ ರಥ ಹೊತ್ತ ವಾಹನವನ್ನು ಕೊಂಡೋಯ್ಯಲಾಯಿತು. ರಥವು ಸುರಕ್ಷಿತವಾಗಿ ರಾತ್ರಿ 8ಕ್ಕೆ ದೇವಸ್ಥಾನ ತಲುಪಿತು.

Exit mobile version