ಬೈಂದೂರು: ಇಲ್ಲಿನ ಯಡ್ತರೆ ಜೆ.ಎನ್.ಆರ್. ಕಲಾಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ರಾತ್ರಿ 10 ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿ, ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ಬಸ್ ರಸ್ತೆ ಬದಿಯ ಸಣ್ಣ ಕಂದಕಕ್ಕೆ ಉರುಳಿದ್ದರೇ, ಲಾರಿ ರಸ್ತೆಯ ಇನ್ನೊಂದು ಬದಿಗೆ ಸರಿದು ನಿಂತಿದೆ.
ಘಟನೆಯ ವಿವರ:
ಮಂಗಳೂರಿನಿಂದ ಬಾಗಲಕೋಟೆಗೆ ಹೊರಟ್ಟಿದ್ದ ಸರಕಾರಿ ಬಸ್ ಯಡ್ತರೆಯ ಕೊಲ್ಲೂರು ಕ್ರಾಸ್ ಸಮೀಪ ಬರುತ್ತಿದ್ದಾಗ ಮುಂದೆ ವಾಹನವಿದ್ದುದರಿಂದ ಬಸ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದನ್ನರಿಯದೇ ಬಸ್ಸಿನ ಹಿಂದೆಯೇ ಇದ್ದ ಲಾರಿಯು ನಿಯಂತ್ರಣಕ್ಕೆ ಬಾರದೇ ಬಸ್ಸಿನ ಹಿಂಭಾಗಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಬಸ್ ಸ್ವಲ್ಪ ಮುಂದೆ ಚಲಿಸಿ ಎಡಭಾಗದಲ್ಲಿದ್ದ ಸಣ್ಣ ಕಮರಿಗೆ ಹೊಗಿ ಬಿದ್ದಿದೆ. ಬಸ್ಸಿಗೆ ತಾಕಿದ ಬಳಿಕ ಲಾರಿಯೂ ಬಲಭಾಗದ ರಸ್ತೆ ಬದಿಗೆ ಹೋಗಿ ನಿಂತಿದೆ. ಲಾರಿ ಮಂಗಳೂರಿನಿಂದ ಕೊಪ್ಪಳಕ್ಕೆ ಕೋಕ್ ತುಂಬಿಸಿಕೊಂಡು ತೆರಳುತ್ತಿತ್ತು. (ಕುಂದಾಪ್ರ ಡಾಟ್ ಕಾಂ)
ಅಪಘಾತದಲ್ಲಿ ಬಸ್ಸಿನ ಹಿಂಬದಿ ಕುಳಿತಿದ್ದ ಪ್ರಯಾಣಿಕರುಗಳಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದರೇ ಓರ್ವ ಮಹಿಳೆಗೆ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದೆ. ಲಾರಿ ಚಾಲಕನಿಗೂ ಗಾಯಗಳಾಗಿದ್ದು, ಎಲ್ಲರನ್ನೂ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಪ್ಪಿದ ಭಾರಿ ಅನಾಹುತ:
ಬಾಗಲಕೋಟೆಗೆ ತೆರಳುತ್ತಿದ್ದ ಬಸ್ಸಿನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ವೃದ್ಧರಿಂದ ಹಿಡಿದು ಚಿಕ್ಕ ಮಗು ಕೂಡ ಬಸ್ಸಿನಲ್ಲಿತ್ತು. ಲಾರಿ ಹಿಂದಿನಿಂದ ಬಂದು ಗುದ್ದಿದ ಬಳಿಕವೂ ಬಲಭಾಗಕ್ಕೆ ತಿರುಗಿ ನಿಂತಿದ್ದರಿಂದ ಅಪಘಾತದ ತೀವ್ರತೆ ಸ್ಪಲ್ಪ ಕಡಿಮೆಯೇ ಇತ್ತು. ಹಿಂಬದಿಯ ಸವಾರರಿಗೆ ಗುದ್ದಿದ ರಭಸದಲ್ಲಿ ಗಾಯಗಳಾಗಿದ್ದರೇ, ಬಸ್ಸು ಹೋಗಿ ಕಂದಕಕ್ಕೆ ಬಿದ್ದುದರಿಂದ ಉಳಿದ ಕೆಲವು ಪ್ರಯಾಣಿಕರುಗಳಿಗೆ ಸಣ್ಣಪುಟ್ಟ ಗಾಯಗಳಾದವು. (ಕುಂದಾಪ್ರ ಡಾಟ್ ಕಾಂ)
ಅಪಘಾತವಾದ ಸ್ಪಲ್ಪ ಹೊತ್ತಿನ ವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸರತಿ ಸಾಲಿನಲ್ಲಿ ವಾಹನ ನಿಂತಿರುವುದು ಕಂಡುಬಂತು. ಕೂಡಲೇ ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಿಯರ ಸಹಕಾರದಿಂದ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಉಳಿದ ಪ್ರಯಾಣಿಕರುಗಳಿಗೆ ಊರಿಗೆ ತೆರಳಲು ಬದಲಿ ಬಸ್ ವ್ಯವಸ್ಥೆ ಮಾಡಲಾಯಿತು. (ಕುಂದಾಪ್ರ ಡಾಟ್ ಕಾಂ)