Kundapra.com ಕುಂದಾಪ್ರ ಡಾಟ್ ಕಾಂ

ಹೊಸಹಿತ್ಲು ಶ್ರೀರಾಮ ಭಜನಾ ಮಂದಿರದ ಸುವರ್ಣ ಮಹೋತ್ಸವ – ವಿವಿಧ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಶ್ರೀರಾಮ ಭಜನಾ ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ಫೆ.20ರಿಂದ ಮಾ.01ರ ವರೆಗೆ ಪಂಚಮ ದಿನ ಪರ್ಯಂತ ಅಖಂಡ ಭಜನಾ ಮಹೋತ್ಸವ, ಕೋಟಿ ರಾಮನಾಮ ತಾರಕ ಜಪಯಜ್ಞ, ಸಂಪೂರ್ಣ ಐತಿಹಾಸಿಕ ಶ್ರೀ ಸೀತಾರಾಮ ಕಲ್ಯಾಣೋತ್ಸವ, ಸಾಂಸ್ಕೃತಿಕ ವೈಭವದ ವಿರಾಟ್ ಮಹಾಯಜ್ಞ ಜರುಗಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಎ. ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಇವರ ನೇತ್ರತ್ವದಲ್ಲಿ ಕ್ಷೇತ್ರ ಪುರೋಹಿತರಾದ ನಾಗರಾಜ ಐತಾಳ್ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಗಳು ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಅವರು ಭಾನುವಾರ ದೇವಳದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ನಂತರ ಅವರು ಮಾಹಿತಿ ನೀಡಿದರು.

ಹಿಂದೆ ಋಷಿ, ಮುನಿಗಳು ಹಾಗೂ ನಮ್ಮ ಪೂರ್ವಜರು ಮಾಡುತ್ತಿರುವಂತಹ ರೀತಿಯಲ್ಲಿ ಸುಸಜ್ಜಿತ ಹಾಗೂ ಸಾಂಪ್ರದಾಯಿಕ ಬೃಹತ್ ಯಜ್ಞಕುಂಡಗಳನ್ನು ನಿರ್ಮಿಸಲಾಗಿದೆ. ಸೀತಾರಾಮ ಕಲ್ಯಾಣೋತ್ಸವಕ್ಕೆ ಹಾಗೂ ಅಭಿಷೇಕಕ್ಕಾಗಿ ರಾಮಚಂದ್ರಾಪುರ ಮಠದಿಂದ ಆಳೆತ್ತರದ ಮೂರ್ತಿಗಳನ್ನು ಶ್ರೀರಾಮಚಂದ್ರಪುರ ಮಠಾಧೀಶರು ಇಲ್ಲಿಗೆ ಕಳುಹಿಸಿ ಕೊಡಲಿದ್ದು, ಮಠದ ಮೂಲಕ ಸಂಪೂರ್ಣ ಸಹಕಾರ ನೀಡುವ ಭರವಸೆ ಕೂಡ ನೀಡಿದ್ದಾರೆ. ಫೆ.26ರಂದು ದಕ್ಷಿಣದ ಅರೆಹೊಳೆ ಭಜನಾ ಮಂದಿರದಿಂದ ಸೀತಾಮಾತೆಯ ಹಾಗೂ ಉತ್ತರದ ಖಂಬದಕೋಣೆಯಿಂದ ಶ್ರೀರಾಮನ ವೈಭವದ ದಿಬ್ಬಣ ಹೊಡಲಿದೆ ಎಂದು ಮಾಹಿತಿ ನೀಡಿದರು.

ಫೆ.24ರ ಸಂಜೆ ಪುರ ಮೆರವಣಿಗೆ, ನಂತರ ಕೋಟಿ ರಾಮತಾರಕ ಯಜ್ಞ ರಾಜೋಪಚಾರ ಪೂಜೆ ನಡೆಯಲಿದೆ. 25ರಂದು ಐದು ದಿನಗಳ ಪರ್ಯಂತ ನಡೆದ ಅಖಂಡ ಭಜನಾ ಮಹೋತ್ಸವದ ಮಂಗಲೋತ್ಸವ, ಶ್ರೀಗುರು ಗಣೇಶ ಪೂಜೆ, ಕೋಟಿ ರಾಮನ ರಾಮ ತಾರಕ ಯಜ್ಞ ನಂತರ ಪೂರ್ಣಾಹುತಿ

ಶ್ರೀರಾಮ ಮಂದಿರದಲ್ಲಿ ಸೀತಾರಾಮಚಂದ್ರ ದೇವರಿಗೆ ಕನಕ ಅಭಿಷೇಕ ಸಂಜೆ ಧಾರ್ಮಿಕ ಸಭೆ, ನಂತರ ಕರಾವಳಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ ವಿಶೇಷವಾಗಿ ಸಮುದ್ರ ನೀರಾಜನ (ಸಮುದ್ರ ಆರತಿ), ಅಷ್ಟವಧಾನ ಸೇವೆ ಜರುಗಲಿದ್ದು, ಪ್ರತಿದಿನ ಮಹಾಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಫೆ.27ರಂದು ಸಂಜೆ 7ರಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಆದರ್ಶ ಗೋಖಲೆ ಕಾರ್ಕಳ ಇವರ ನಿರ್ವಹಣೇಯಲ್ಲಿ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ನೃತ್ಯ ವೈವಿಧ್ಯ ಪುಣ್ಯಭೂಮಿ ಭಾರತ, ಫೆ.28ರಂದು ಸಂಜೆ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರಿಂದ ಕರ್ನಾಟಕ ಕಲಾ ವಿದ್ವಾನ್ ಕೆ. ಚಂದ್ರಶೇಖರ್ ನಾವಡ ಮತ್ತು ಬಳಗದವರಿಂದ ನೃತ್ಯರೂಪಕ ನಾಟ್ಯ ವೈಭವ ಹಾಗೂ ಸಂಭವಾಮಿ ಯುಗೆ ಯುಗೆ, ಮಾ.01ರಂದು ಸಂಜೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮತ್ತು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರಿಂದ ತೆಂಕು ಮತ್ತು ಬಡಗುಟ್ಟಿನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಉತ್ಸವಕ್ಕೆ ಬರುವ ಭಕ್ತಾದಿಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ, ಅನ್ನ ಛತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದ್ದು, ನಮ್ಮ ಸ್ವಯಂಸೇವಕರು ಇದರ ಕಾರ್ಯನಿರ್ವಹಣೇ ಮಡಲಿದ್ದಾರೆ. ಯಾವುದೇ ರೀತಿಯ ಕುಂದು ಕೊರತೆಗಳಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಆರಕ್ಷಕ ಸಿಬ್ಬಂದಿಗಳು ಕೈಜೋಡಿಸಲಿದ್ದಾರೆ. ಫೆ20ದ ಅವರು ಫೆ.23ರ ತನಕ ಹೊರೆಕಾಣಿಕೆಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಸುವರ್ಣ ಮಹೋತ್ಸವ ಸಮಿತಿ ಸದಸ್ಯ ಪ್ರಣಯ್‌ಕುಮಾರ್ ಶೆಟ್ಟಿ, ಭಜನಾ ಮಂದಿರದ ಅಧ್ಯಕ್ಷ ಉದಯ್ ಶ್ರೀಯಾನ್, ರತ್ನಾಕರ ತಗ್ಗಿನಮನೆ ಇದ್ದರು.

Exit mobile version