ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಟಕಗಳು ಮನೋರಂಜನೆಯ ಮಾಧ್ಯಮವಾಗಿರುವುದರ ಜತೆಗೆ ಸಮಾಜಕ್ಕೆ ಉಪಯುಕ್ತ ಸಂದೇಶ ನೀಡುವುದೂ ಸಾಧ್ಯ. ತಂಡಗಳು ತಾವು ಪ್ರದರ್ಶಿಸುವ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಅದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಕೊಡುಗೆ ನೀಡಿದಂತಾಗುತ್ತದೆ ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಹೇಳಿದರು.
ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ಲಾವಣ್ಯದ 46ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ-23 ಐದು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕಲಾವಿದರು ತಮ್ಮ ಪಾತ್ರಗಳಿಗಾಗಿ ಬೇಡಿಕೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ಇಂದು ಹಲವು ನಾಟಕ ಕಲಾ ಸಂಸ್ಥೆಗಳು ಮುಚ್ಚಲ್ಪಟ್ಟಿದೆ, ಆದರೆ ಬೈಂದೂರಿನ ಲಾವಣ್ಯ ಸಂಸ್ಥೆ ಇದಕ್ಕೆ ಅಪವಾದವಾಗಿದ್ದು, ಕಳೆದ 45ವರ್ಷಗಳಿಂದ ಹಲವು ತ್ರಾಸದಾಯಕ ಪರಿಸ್ಥಿತಿಯನ್ನು ಎದುರಿಸಿಯೂ, ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ ಎಂದರು.
ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥ ಸದಾಶಿವ ರಾವ್ ಶುಭಾಶಂಸನಗೈದು, ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆ ಹೆಗ್ಗಳಿಕೆಯಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಸ್ಥಿತರಿದ್ದರು. ಲಾವಣ್ಯದ ಸ್ಥಾಪಾಧ್ಯಕ್ಷ ಉಪ್ಪುಂದ ಶ್ರೀನಿವಾಸ ಪ್ರಭು ಇವರಿಗೆ ೨೦೨೦-೨೧ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿರುವುದಕ್ಕೆ ಗೌರವಿಸಲಾಯಿತು.
ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವರದಿ ಮಂಡಿಸಿದರು. ಲಾವಣ್ಯ ಸದಸ್ಯರಾದ ಮೂರ್ತಿ ಬೈಂದೂರು ಪ್ರಾರ್ಥಿಸಿದರು. ನಾಗರಾಜ ಪಿ. ಸ್ವಾಗತಿಸಿ, ಸುಬ್ರಹ್ಮಣ್ಯ ಜಿ. ನಿರೂಪಿಸಿದರು. ದಯಾನಂದ ಪಿ. ವಂದಿಸಿದರು. ನಂತರ ಲಾವಣ್ಯ ಕಲಾವಿದರಿಂದ ಬೆಂಗಳೂರು ರಾಜೇಂದ್ರ ಕಾರಂತ್ ರಚಿಸಿ ನಿರ್ದೇಶಿಸಿದ ನಾಯಿ ಕಳೆದಿದೆ ನಾಟಕ ಪ್ರದರ್ಶನಗೊಂಡಿತು.