ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಫೆ.28: 7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ನೀತಿ ವಿರೋಧಿಸಿ ಹಳೇ ಪಿಂಚಣಿ ನೀತಿಗೆ ಆಗ್ರಹಿಸಿ ಮುಷ್ಕರಕ್ಕೆ ಸರಕಾರಿ ನೌಕರರು ಮುಂದಾಗಿದ್ದಾರೆ.
ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ. ಸರ್ಕಾರಿ ಸಂಘದ ನೌಕರರಲ್ಲಿ ಯಾವುದೇ ಒಡಕಿಲ್ಲ. ಎಲ್ಲ ಸರ್ಕಾರಿ ನೌಕರರು ಒಗ್ಗಟ್ಟಾಗಿದ್ದೇವೆ ಎಂದರು. ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಕರ್ತವ್ಯಕ್ಕೆ ಗೈರಾಗುತ್ತೇವೆ ಎಂದು 40 ಸಂಘಟನೆಗಳ 10 ಲಕ್ಷ ನೌಕರರು ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ವಿಧಾನಸೌಧದಲ್ಲಿ ಸರ್ಕಾರಿ ನೌಕರರ ಸಂಘದ ನಿಯೋಗದ ಜೊತೆ ಸಭೆ ನಡೆಸಿ, ಸಂಧಾನಕ್ಕೆ ಯತ್ನಿಸಿದರು. ಬೇಡಿಕೆ ಈಡೇರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಆದರೆ ಸರ್ಕಾರಿ ನೌಕರರು ಒಪ್ಪದ ಕಾರಣ ಸಂಧಾನ ಸಭೆ ವಿಫಲವಾಗಿದೆ.
ಪರಿಸ್ಥಿತಿ ವಿಷಮ ಆಗದಂತೆ ತಡೆಯಲು ಮಂಗಳವಾರ ರಾತ್ರಿ 9:30ಕ್ಕೆ ಸಿಎಂ ಬೊಮ್ಮಾಯಿತುರ್ತುಸಭೆ ಕರೆದಿದ್ದಾರೆ. ಒಂದೊಮ್ಮೆ ಸಂಧಾನ ವಿಫಲವಾದರೆ ಬುಧವಾರದಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಬಂದ್ ಆಗಲಿವೆ.
ಯಾವ ಕಚೇರಿಗಳು ಬಂದ್?
ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಎಲ್ಲಾ ಕಚೇರಿಗಳು, ಬಿಬಿಎಂಪಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯತ್, ಸರ್ಕಾರಿ ಶಾಲೆಗಳು, ಪುರಸಭೆ, ಸರ್ಕಾರಿ ಹಾಸ್ಟೆಲ್ ಗಳು, ಕಂದಾಯ ಇಲಾಖೆ, ಸರ್ಕಾರಿ ಕಾಲೇಜುಗಳು ಬಂದ್ ಆಗಲಿವೆ.
ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಸೇವೆಯಷ್ಟೇ ಲಭ್ಯವಿದ್ದು, ಆಸ್ತಿ ನೋಂದಣಿ ಸ್ಥಗಿತವಾಗುವ ಸಾಧ್ಯತೆಯಿದೆ. ಮುಷ್ಕರಕ್ಕೆ ಜಲಮಂಡಳಿ, ಬೆಸ್ಕಾಂ ನೌಕರರ ಸಂಘ ನೈತಿಕ ಬೆಂಬಲ ನೀಡಿವೆ.