Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ, ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಧಾರ್ಮಿಕ ಕ್ಷೇತ್ರಗಳಲ್ಲಿರುವುದು ಕೇವಲ ಎರಡು ಪಕ್ಷಗಳು. ಒಂದು ಕೃಷ್ಣಪಕ್ಷ ಅಂದರೆ ಕರ್ಮ, ಇನ್ನೊಂದು ಶುಕ್ಲಪಕ್ಷ ಅಂದರೆ ಜ್ಞಾನ. ನಮ್ಮಲ್ಲಿರುವ ರಾಗದ್ವೇಷ, ಮನೆಯ ಸಮಸ್ಯೆಗಳ ಚರ್ಚೆ ದೇವಳದ ಚೌಕಟ್ಟಿನಲ್ಲಿ ಸಲ್ಲುವುದಿಲ್ಲ. ಹೀಗಾಗಿ ಅಚ್ಚ ಭಾರತೀಯರಾಗಿ ಆತ್ಮ, ದೇಹಶುದ್ದರಾಗಿ ಯೋಗ-ಭಾಗ್ಯಕ್ಕಾಗಿ ಧಾರ್ಮಿಕ ಪರಂಪರೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ಪ್ರಾರ್ಥಿಸಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಅನೇಕ ವರ್ಷಗಳಿಂದ ನಮ್ಮ ಧರ್ಮ ಸಂಸ್ಕೃತಿ ಮೇಲೆ ಆಕ್ರಮಣಗಳು ನಡೆದಿದ್ದರೂ ನಮ್ಮ ಸಂಸ್ಕೃತಿಯನ್ನು ಬೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂತಹ ಅದ್ಭುತವಾದ ಶಕ್ತಿ ನಮ್ಮ ಸಂಸ್ಕೃತಿ, ಧರ್ಮಕ್ಕೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಈ ಪವಿತ್ರವಾದ ಸಂಸ್ಕೃತಿ, ಸಂಸ್ಕಾರಯುಕ್ತ ಜೀವನ ಮೌಲ್ಯಗಳು ಉಳಿಯಬೇಕಾದರೆ ಮನೆ ಮನಗಳು ಧರ್ಮಕ್ಷೇತ್ರವಾಗಬೇಕು. ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ನಿರ್ಮಾಣ ಮಾಡಬೇಕು. ನಮ್ಮಲ್ಲಿನ ಜಾತಿಗಳನ್ನು ಬದಿಗೊತ್ತಿ ಧರ್ಮ ಸಂರಕ್ಷಣೆ, ಧರ್ಮ ಜಾಗೃತಿಗೊಳಿಸುವ ಬಗ್ಗೆ ಎಲ್ಲರೂ ಒಂದಾಗಬೇಕು. ಮುಖ್ಯವಾಗಿ ಯುವಜನರಲ್ಲಿ ಧರ್ಮ ಜಾಗೃತಿ ಮೂಡಿಸಬೇಕು ಎಂದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ರಾಜೇಶ್ ಪೈ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಬಿಎಚ್‌ಪಿ ನಾಗರಾಜ ಖಾರ್ವಿ, ಮಂಜು ದೇವಾಡಿಗ, ಉದ್ಯಮಿಗಳಾದ ಯು. ಚಂದ್ರಕಾಂತ್ ಪ್ರಭು, ದಿವಾಕರ್ ಶೆಟ್ಟಿ ನೆಲ್ಯಾಡಿ, ಜಿ. ಬಿ. ಪರಮೇಶ್ವರ್ ಗಾಣಿಗ, ದೇವಳದ ಅರ್ಚಕ ಯು. ಸಂದೇಶ ಭಟ್, ದೇವಾಡಿಗ ಸಂಘದ ಅಧ್ಯಕ್ಷ ಮಾಧವ ದೇವಾಡಿಗ ಉಪಸ್ಥಿತರಿದ್ದರು. ಬಿಜೂರು ಜಯರಾಮ ಶೆಟ್ಟಿ ಸ್ವಾಗತಿಸಿ, ಗೌರಿ ದೇವಾಡಿಗ ವಂದಿಸಿದರು. ಸುಬ್ರಹ್ಮಣ್ಯ ಉಪ್ಪುಂದ ನಿರೂಪಿಸಿದರು. ನಂತರ ಮೂಲ್ಕಿ ರವೀಂದ್ರ ಪ್ರಭು ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Exit mobile version