Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ಸಂಘ ಶಾರ್ಜಾ: ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ:
ಯುಎಇನಲ್ಲಿನ ಕರ್ನಾಟಕ ಸಂಘ ಶಾರ್ಜಾ ಎರಡು ದಶಕಗಳನ್ನು ಪೂರ್ತಿಗೊಳಿಸಿ, ಇಪ್ಪತ್ತೊಂದನೆಯ ವರ್ಷದತ್ತ ಮುನ್ನಡೆಯುತ್ತಿದ್ದು, ಇದರ ನೂತನ 12ನೇ ಅಧ್ಯಕ್ಷರಾಗಿ ಸತೀಶ್ ಪೂಜಾರಿಯವರು ಎರಡನೆಯ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

2023 ಮಾರ್ಚ್ 11ರಂದು ಸಂಜೆ ದುಬಾಯಿ ಫಾರ್ಚೂನ್ ಅಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಮಹಾಸಭೆಯು ಪ್ರಾರ್ಥನೆ, ಸ್ವಾಗತದೊಂದಿಗೆ ಪ್ರಾರಂಭವಾಯಿತು.

ಪೋಷಕರಾದ ಮಾರ್ಕ ಡೆನಿಸ್ ಡಿ’ಸೋಜಾ ಎರಡು ದಶಕಗಳು ನಡೆದುಬಂದ ಹಾದಿಯ ಸಾಧನೆಗಳ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿಯವರು ವಾರ್ಷಿಕ ವರದಿವಾಚಿಸಿ ಅನುಮೋದನೆಯನ್ನು ಪಡೆದುಕೊಂಡರು. ಖಜಾಂಚಿ ಮಹ್ಮದ್ ಅಬ್ರಾರ್ ಆಯವ್ಯಯ ಲೆಕ್ಕ ಪತ್ರವನ್ನು ಮಂಡಿಸಿ ಸರ್ವ ಸದಸ್ಯರ ಅನುಮತಿಯನ್ನು ಪಡೆದುಕೊಂಡರು. ಉಪಾಧ್ಯಕ್ಷರಾದ ನೋಯಲ್ ಅಲ್ಮೆಡಾ ಅವರು ತಮ್ಮ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಯಶಸ್ಸಿನ ಹಿಂದಿನ ರುವಾರಿಗಳ ಸಾಧನೆಗಳನ್ನು ಶ್ಲಾಘಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷರಾದ ಮಹ್ಮದ್ ಇಬ್ರಾಹಿಂ ಮೂಳೂರ್ ರವರು ತಮ್ಮ ಅಧಿಕಾರದ ಅವಧಿಯಲ್ಲಿ ಅನಿರೀಕ್ಷಿತ ಕೊರೋನದ ಕಷ್ಟಕರ ದಿನಗಳು ಎದುರಾಗಿದ್ದು ಮಂಗಳೂರಿನಲ್ಲಿ ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ಮತ್ತು ಮಧ್ಯ ಕರ್ನಾಟಕದ ಅಮೀನಗಡದಲ್ಲಿ ಸಹ ಹೆಚ್ಚಿನ ಕುಟುಬದವರಿಗೆ ಸಹಾಯ ಹಸ್ತ ನೀಡಿರುವುದು, ಉಡುಪಿ ಜಿಲ್ಲಾಧಿಕಾರಿಗಳ ಸಂತ್ರಸ್ತರ ನಿಧಿಗೆ ಒಂದು ಲಕ್ಷ ದೇಣಿಗೆಯನ್ನು ನೀಡಿರುವುದು, ರಕ್ತದಾನ ಶಿಬಿರ, ಕ್ರೀಡಾಕೂಟ, ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರಧಾನ, ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವಲ್ಲಿ ಸಹಕಾರ ನೀಡಿರುವ ಸರ್ವರನ್ನು ಸ್ಮರಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸಿ ತಮ್ಮ ಅಧಿಕಾರವನ್ನು ಹಸ್ತಾಂತರಿಸುವ ಮುನ್ನ ವಿದಾಯ ಭಾಷಣ ಮಾಡಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಚುನಾವಣಾ ಅಧಿಕಾರಿಯಾಗಿ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಬಿ. ಕೆ. ಗಣೇಶ್ ರೈಯವರು 2023-2024ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರುಗಳನ್ನು ಘೋಷಿಸಿ ವೇದಿಕೆಗೆ ಬರಮಾಡಿಕೊಂಡರು. ಪೋಷಕರಾದ ಮಾರ್ಕ್ ಡೆನಿಸ್ ಡಿ’ಸೋಜಾರವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿದಿ ವಿಧಾನಗಳನ್ನು ಬೋಧಿಸಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸತೀಶ್ ಪೂಜಾರಿಯವರು ತಮ್ಮನ್ನು ಆಯ್ಕೆ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿ, ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಯಶಸ್ವಿ ಪಥದಲ್ಲಿ ಮುನ್ನಡೆಸುವ ಅಸ್ವಾಸನೆಯನ್ನು ನೀಡಿದರು.

ಪೂರ್ವ ಅಧ್ಯಕ್ಷರುಗಳಾದ ಆನಂದ್ ಬೈಲೂರ್, ಪ್ರಭಾಕರ ಅಂಬಲ್ತೆರೆ, ಎಂ.ಇ. ಮೂಳೂರು ಹಾಗೂ ಬಿ. ಕೆ. ಗಣೇಶ್ ರೈ ನೂತನ ಸಮಿತಿಗೆ ಶುಭಹಾರೈಸಿದರು. ಕರ್ನಾಟಕ ಸಂಘ ಶಾರ್ಜಾದ ನೂತನ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ವಂದಿಸಿದರು.

Exit mobile version