Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಮಾರ್ಚ್ 15ಕ್ಕೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ‘ಮಿನಿ ವಿಧಾನಸೌಧ’ ಮಾರ್ಚ್ 15ರಂದು ಉದ್ಘಾಟನೆಗೆ ಸಜ್ಜಾಗಿದೆ.

ಮಾ.15ರ ಬೆಳಿಗ್ಗೆ 10-30ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ನೂತನ ಕಟ್ಟಡವನ್ನು ಉದ್ಘಾಟನೆಗೊಳಿಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಆರ್. ಅಶೋಕ್, ವಿ. ಸೋಮಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.

ಬೈಂದೂರಿಗೆ ಮುಕುಟಪ್ರಾಯ:
ಅಭಿವೃದ್ಧಿಯ ಪಥದಲ್ಲಿರುವ ಬೈಂದೂರು ತಾಲೂಕಿಗೆ ಮುಕುಟಪ್ರಾಯದಂತೆ ಬೈಂದೂರು ಮಿನಿ ವಿಧಾನಸೌಧ ಕಂಗೊಳಿಸುತ್ತಿದೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಅವಧಿಯಲ್ಲಿ ತಾಲೂಕು ಘೋಷಣೆಯಾಗಿ ಮಿನಿ ವಿಧಾನಸೌಧದ ನಿರ್ಮಿಸುವ ಪ್ರಕ್ರಿಯೆ ಆರಂಭಗೊಂಡರೇ, ಹಾಲಿ ಸಂಸದರಾದ ಬಿ. ವೈ. ರಾಘವೇಂದ್ರ ಹಾಗೂ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪ್ರಯತ್ನದಿಂದಾಗಿ ಎರಡು ವರ್ಷಗಳಲ್ಲಿ ಸುಂದರ ಆಡಳಿತ ಸೌಧ ತಲೆಯೆತ್ತಿ ನಿಂತಿದೆ. ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 8.5 ಕೋಟಿ ರೂ. ವೆಚ್ಚದ ವಿನಿವಿಧಾನಸೌಧ ಕಾಮಗಾರಿಗೆ 2021ರಲ್ಲಿ ಶಿಲನ್ಯಾಸ ಮಾಡಿದ್ದರೇ,  2021ರ ಮಾರ್ಚ್ 6ರಂದು ಗುದ್ದಲಿಪೂಜೆ ನೆರವೇರಿಸಲಾಗಿತ್ತು. ಕರ್ನಾಟಕ ಗೃಹ ಮಂಡಳಿ ಯೋಜನೆ ನಿರ್ವಹಣೆ ಮಾಡಿದ್ದು, ಕಾರ್ಕಳದ ಗುತ್ತಿಗೆದಾರ ಸುಜಯ್ ಅವರು ನಿರ್ಮಾಣದ ಹೊಣೆ ಹೊತ್ತಿದ್ದರು.

ಕಾರ್ಯಕ್ರಮಕ್ಕಾಗಿ ತಾಲೂಕು ಆಡಳಿತ ಭರದ ಸಿದ್ಧತೆ ನಡೆಸುತ್ತಿದ್ದು, ಗ್ರೇಡ್-1 ತಹಶಿಲ್ದಾರ್ ಪ್ರಭುಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಬೈಂದೂರಿನ ನಾಗರಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ?
ಕಟ್ಟಡ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದರೂ, ಸಣ್ಣಪುಟ್ಟ ಕೆಲಸಗಳು ಇನ್ನೂ ಬಾಕಿ ಉಳಿದಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನು ಎರಡು ವಾರ ಬೇಕಿದೆ. ಅಲ್ಲದೇ ಪ್ಲಂಬಿಂಗ್, ಇಲೆಕ್ಟ್ರೀಶಿಯನ್ ಹಾಗೂ ಅಲ್ಯೂಮಿನಿಯಂ ಪಾರ್ಟೆಷನ್ ಕೆಲಸಗಳು ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳು ಬೇಕಿದೆ ಎನ್ನಲಾಗಿದೆ. ಈ ನಡುವೆ ನೀತಿ ಸಂಹಿತೆ ಎದುರಾಗುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ  ಕಟ್ಟಡ ಉದ್ಘಾಟನೆ ಮಾಡಲಾಗುತ್ತಿದೆ./ ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
ಬೈಂದೂರು ಮಿನಿ ವಿಧಾನಸೌಧ ಕಾಮಗಾರಿಗೆ ಚಾಲನೆ – https://kundapraa.com/?p=45755 .
► ಬೈಂದೂರು ತಾಲೂಕು: ನಾಲ್ಕು ದಶಕಗಳ ಹೋರಾಟಕ್ಕೆ ಸಂದ ಜಯ. ಆಗಿರುವುದೇನು? ಆಗಬೇಕಾದ್ದೇನು? – https://kundapraa.com/?p=22073 .

Exit mobile version