Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮೈಸೂರು ವಿಭಾಗ ಮಟ್ಟದ ಕಬ್ಬಡ್ಡಿ ಪಂದ್ಯಾಟಕ್ಕೆ ಚಾಲನೆ

ಬೈಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಉಳಿಸಿಕೊಂಡಿರುವ ಉಡುಪಿ ಜಿಲ್ಲೆ ಕ್ರೀಡಾ ಕ್ಷೇತ್ರಕ್ಕೂ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಹೇಳಿದರು.

ಅವರು ಬೈಂದೂರು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 2 ದಿನಗಳ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಗ್ರಾ.ಪಂ ಸದಸ್ಯ ವೆಂಕ್ಟ ಪೂಜಾರಿ, ಬೈಂದೂರು ಮಾದರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶಾನುಭೋಗ್, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉದ್ಯಮಿ ಬಾರ್ಕೂರು ಅಣ್ಣಯ್ಯ ಶೇರುಗಾರ್ ಮೊದಲಾದವರು ವೇದಿಯಲ್ಲಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಡೆದ ಅದ್ದೂರಿ ಪುರಮೆರವಣಿಗೆಗೆ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಸದಸ್ಯ ಹಾಗೂ ಬೈಂದೂರು ಮಾದರಿ ಶಾಲೆಯ ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ರಾಜು ಪೂಜಾರಿ ಧ್ವಜಾರೋಹಣಗೈದರು.

ಇದೇ ಸಂದರ್ಭದಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಏಳು ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ಉಪಕರಣಕ್ಕಾಗಿ ಸಂಪೂರ್ಣ ಧನಸಹಾಯ ಮಾಡಿದ ಹಳೆ ವಿದ್ಯಾರ್ಥಿಗಾದ ಚರಣ್ ಬೈಂದೂರು ಮತ್ತು ಅವರ ಸ್ನೇಹಿತರುಗಳನ್ನು ಅಭಿನಂದಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಮಧುಕರ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯೋಪಧ್ಯಾಯ ಜನಾರ್ಧನ ದೇವಾಡಿಗ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮವನ್ನು, ಸತೀಶ್ ಕ್ರೀಡಾ ವಿಭಾಗವನ್ನು ನಿರೂಪಿಸಿದರು. ಕಬ್ಬಡ್ಡಿ ಪಂದ್ಯಾಟದಲ್ಲಿ 8 ಜಿಲ್ಲೆಗಳ 32ತಂಡ ಹಾಗೂ 450 ಕ್ರೀಡಾಳುಗಳು ಭಾಗವಹಿಸಿದ್ದರು.

Exit mobile version