ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ಹಿಂದೆ ಬಿಜೆಪಿ ಅಧಿಕಾರ ನಡೆಸಿದ್ದರೂ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಾಗಿರಲಿಲ್ಲ. ಈ ಭಾರಿ ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಕಂಡಾಗ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಅಧಿಕ ಸ್ಥಾನ ದೊರೆಯುವ ಭರವಸೆ ಮೂಡಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕರ್ನಾಟಕದ ಆಯೋಜಿಸಿರುವ ವಿಜಯ ಸಂಕಲ್ಪ ಯಾತ್ರೆಯು ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲಕ್ಕೆ ಆಗಮಿಸಿದ್ದು, ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಯೊಬ್ಬ ಜನ ಸಾಮಾನ್ಯರಿಗೂ ಬಿಜೆಪಿ ಪಕ್ಷದ ಸಾಧನೆಗಳನ್ನು ತಿಳಿಸುವ ಉದ್ದೇಶದ ಈ ವಿಜಯ ಸಂಕಲ್ಪ ಯಾತ್ರೆ ಸಂಘಟಿಸಲಾಗಿದ್ದು, ಅದು ಅತ್ಯಂತ ಯಶಸ್ವಿಯಾಗಿದೆ. ನಿರೀಕ್ಷೆಗೂ ಮೀರಿ ಜನರಿಂದ ಸ್ಪಂಧನೆ ದೊರೆತಿದೆ. ಬಿಜೆಪಿ ಸಂಘಟನಾತ್ಮಕವಾಗಿ ಚುನಾವಣೆಗೆ ಸಜ್ಜಾಗಿದ್ದು, ರಾಷ್ಟ್ರರಕ್ಷಣೆ ಹಾಗೂ ಧರ್ಮ ರಕ್ಷಣೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.
ಶಿವಮೊಗ್ಗ ಲೋಕಸಭಾ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗಿದೆ ಎಂದು ಬ್ರಿಟನ್‌ನಲ್ಲಿ ಹೇಳಿಕೆ ನೀಡುವ ಮೂಲಕ ದೇಶದ ಮಾನ ಕಳೆದಿದ್ದಾರೆ. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಪ್ರಭಾರಿ ಉದಯ ಕುಮಾರ ಶೆಟ್ಟಿ, ರಾಜ್ಯ ಸಂಚಾಲಕ ರಾಜೇಂದ್ರ, ಸಹ ಸಂಚಾಲಕ ದತ್ತಾತ್ರೇಯ, ಕಿಶೋರ ಕುಮಾರ, ಬಿಜೆಪಿ ಮಂಡಲದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರ್, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಅನಿತಾ ಶ್ರೀಧರ್, ರಾಜೇಶ್ ಕಾವೇರಿ, ಸದಾನಂದ ಉಪ್ಪಿನಕುದ್ರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.