ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವೀಕರಣಗೊಂಡ ನಗರದ ಹೂವಿನ ಮಾರುಕಟ್ಟೆ, ಶೆಣೈ ಪಾರ್ಕ್ ಇತ್ತೀಚಿಗೆ ಉದ್ಘಾಟನೆಗೊಂಡಿತು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮಾತನಾಡಿ, ಕುಂದಾಪುರ ಪುರಸಭೆಗೆ ಲಭ್ಯವಾದ 6.5 ಕೋಟಿ ನಗರೋತ್ಥಾನ ಯೋಜನೆಯ ಅನುದಾನದ ಕ್ರಿಯಾಯೋಜನೆ ಸಿದ್ಧಪಡಿಸುವ ಸಂದರ್ಭ ಸ್ಥಳೀಯ ಸದಸ್ಯೆ ದೇವಕಿ ಸಣ್ಣಯ್ಯ ಅವರು ಹೂವಿನ ಮಾರುಕಟ್ಟೆ ನವೀಕರಣಕ್ಕೆ ಸಲಹೆ ನೀಡಿದಂತೆ ನವೀಕರಣ ಕಾರ್ಯ ಕೈಗೊಳ್ಳಲಾಯಿತು ಎಂದರು.
ಕುಂದಾಪುರ ಪುರಸಭೆಯ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ ಉದ್ಘಾಟಿಸಿ, ನಗರೋತ್ಥಾನ ಯೋಜನೆಯ ಅನುದಾನ ಬಳಸಿಕೊಂಡು ಹೂವಿನ ಮಾರುಕಟ್ಟೆ ನವೀಕರಣ ಮಾಡಲಾಗಿದೆ. ಕುಂದಾಪುರ ಪೇಟೆಯ ನಡುವೆ ಇರುವ ಹೂವಿನ ಮಾರುಕಟ್ಟೆಯನ್ನು ಸುಂದರವಾಗಿ ನವೀಕರಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶೆಣೈ ಪಾರ್ಕನ್ನು ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ ಉದ್ಘಾಟಿಸಿದರು. ಪುರಸಭೆಯ ಸದಸ್ಯರಾದ ಪ್ರಭಾಕರ, ಶ್ರೀಧರ ಶೇರುಗಾರ್, ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಶೇಖರ ಪೂಜಾರಿ, ರಾಘವೇಂದ್ರ ಖಾರ್ವಿ, ನಾಮನಿರ್ದೇಶನ ಸದಸ್ಯರಾದ ಪುಷ್ಪಾ ಶೇಟ್, ರತ್ನಾಕರ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ ವಂದಿಸಿದರು. ಚಂದ್ರಕಾಂತ್ ಕಾರ್ಯಕ್ರಮ ನಿರ್ವಹಿಸಿದರು.