Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿಯ ಹಾಲಾಡಿ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಲಿದೆಯಾ ಕಾಂಗ್ರೆಸ್?

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಅರಬ್ಬೀ ಸಮುದ್ರದ ತಟ, ಮಲೆನಾಡಿನ ಪ್ರದೇಶಗಳನ್ನೊಳಗೊಂಡ ಜಿಲ್ಲೆಯ ವಿಸ್ತಾರವಾದ ಪ್ರದೇಶ – ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳ ಹುರಿಯಾಳುಗಳ ಮತಭೇಟೆಯಲ್ಲಿ ತೊಡಗಿದ್ದಾರೆ. ಈ ಭಾರಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬ ಕುತೂಹಲವಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅಭ್ಯರ್ಥಿ ಯಾರು ಎಂಬುವುದರ ಮೇಲೆ ಕಾಂಗ್ರೆಸ್ – ಬಿಜೆಪಿ ಗೆಲುವಿನ ಲೆಕ್ಕಾಚಾರ ನಿರ್ಣಯವಾಗಲಿದೆ.

69 ಗ್ರಾಮಗಳನ್ನು ಹೊಂದಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 218 ಮತಗಟ್ಟೆಗಳಿವೆ. ಕ್ಷೇತ್ರ ಪುನರ್ ವಿಂಗಡನೆಯ ಬಳಿಕ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಬಹುಪಾಲು ಕ್ಷೇತ್ರಗಳು ಕುಂದಾಪುರ ಕ್ಷೇತ್ರವನ್ನು ಸೇರಿದ್ದವು. ಹಂಗಾರಕಟ್ಟೆಯಿಂದ ಕೋಡಿ ತನಕದ ಕರಾವಳಿ ಭಾಗ, ಹೊಸಂಗಡಿಯಿಂದ ಈಚೆಗಿನ ಮಲೆನಾಡಿನ ಗ್ರಾಮಗಳು, ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತಿ ಕುಂದಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಕುಂದಾಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಂಯುಕ್ತ ಜನತಾದಳ ಪಕ್ಷಗಳು ಸ್ಪರ್ಧಿಸಿದ್ದರೂ, ಬಿಜೆಪಿ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟು ಕಳೆದ 24 ವರ್ಷಗಳಿಂದ (ಒಂದು ಅವಧಿ ಪಕ್ಷೇತರ ಶಾಸಕರಾಗಿದ್ದ ಹಾಲಾಡಿ) ಬಿಜೆಪಿ ಅಧಿಕಾರದಲ್ಲಿದೆ. ಸಿಪಿಐಎಂ ಬೇರು ಕುಂದಾಪುರದಲ್ಲಿ ಗಟ್ಟಿಯಾಗಿದ್ದು, ಅಭ್ಯರ್ಥಿ ಗೆಲುವು ಸಾಧಿಸದಿದ್ದರೂ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಶಕ್ತವಾಗದಿದೆ. ಈ ಭಾರಿ ಕೆ.ಆರ್.ಎಸ್ ಪಕ್ಷ, ಉತ್ತಮ ಪ್ರಜಾಕೀಯ, ಆಮ್ ಆದ್ಮಿ ಅಭ್ಯರ್ಥಿಗಳೂ ಸ್ಪರ್ಧಿಸುವ ಸಾಧ್ಯತೆ ಇದೆ /ಕುಂದಾಪ್ರ ಡಾಟ್ ಕಾಂ ವರದಿ/

ಕುಂದಾಪುರ ರಾಜಕೀಯ ಇತಿಹಾಸ:
ಕುಂದಾಪುರ ರಾಜಕೀಯ ಇತಿಹಾಸವನ್ನು ಗಮನಿಸಿದರೆ, 1983, 1985, 1989, 1994ರಲ್ಲಿ ಕಾಂಗ್ರೆಸ್‌ನ ನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಹೀಗೆ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರಗೆ 1999ರಲ್ಲಿ ಕಣಕ್ಕಿಳಿದ ಮೊದಲ ಚುನಾವಣೆಯಲ್ಲೇ ಸೋಲುಣಿಸಿದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. 1999ರಲ್ಲಿ 1 ಸಾವಿರ ಮತಗಳಿಂದ ಪ್ರತಾಪಚಂದ್ರ ಶೆಟ್ಟಿ ಅವರಗೆ ಸೋಲುಣಿಸಿದ ಹಾಲಾಡಿ, 2004ರಲ್ಲಿ ಗೆಲುವಿನ ಅಂತರವನ್ನು 20 ಸಾವಿರಕ್ಕೆ ವಿಸ್ತರಿಸಿಕೊಂಡರು. 2008ರಲ್ಲಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದ ಪ್ರಭಾವಿ ರಾಜಕಾರಣ ಕೆ. ಜಯಪ್ರಕಾಶ್ ಹೆಗ್ಡೆಯನ್ನೇ 25 ಸಾವಿರ ಮತಗಳಿಂದ ಮಣಿಸಿದ್ದರು.

ಹೀಗೆ ಮೂರು ಬಾರಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 2012ರಲ್ಲಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇದರಿಂದ ಬೇಸರಗೊಂಡ ಹಾಲಾಡಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನೇ ತೊರೆದಿದ್ದರು.

ರಾಷ್ಟ್ರೀಯ ಪಕ್ಷಗಳನ್ನು ಏಕಾಂಗಿಯಾಗಿ ಮಣಿಸಿದ್ದ ಹಾಲಾಡಿ:
ಮುಂದೆ 2013ರ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಕಣಕ್ಕಿಳಿದು 89 ಸಾವಿರ ಮತಗಳನ್ನು ಪಡೆದು 40 ಸಾವಿರ ಮತಗಳ ಅಂತರದಿಂದ ಹಾಲಾಡಿ ಭಾರೀ ಜಯ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದು ಹಾಲಾಡಿ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿ ಹಿಡಿದಂತಿತ್ತು. ಇದಾದ ಬಳಿಕ 2018ರ ಚುನಾವಣೆ ವೇಳೆಗೆ ಮರಳಿ ಬಿಜೆಪಿಗೆ ಬಂದಿದ್ದ ಹಾಲಾಡಿ ಮತ್ತೆ ಇಲ್ಲಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್’ನ ರಾಕೇಶ್ ಮಲ್ಲಿ 56,405 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. /ಕುಂದಾಪ್ರ ಡಾಟ್ ಕಾಂ ವರದಿ/

ಕುಂದಾಪುರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಯಾರು?
ಕುಂದಾಪುರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಖುದ್ದು ಹಾಲಾಡಿಯೇ ತಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರೆ ಬಿಜೆಪಿಯ ಯಾವ ಅಭ್ಯರ್ಥಿಯೇ ಸ್ಪರ್ಧಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗು ಸಾಧ್ಯತೆ ಇದೆ.

ಸದ್ಯದ ಲೆಕ್ಕಾಚಾರದಂತೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೇ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಇನ್ನು ಹಾಲಾಡಿ ಅವರನ್ನು ಹೊರತುಪಡಿಸಿದರೆ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಲವು ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕಿರಣ್ ಕೊಡ್ಗಿ ಅವರು ಹಾಲಾಡಿ ಅವರ ಬೆಂಬಲಿಗರೇ ಆದರೂ ಶಾಸಕ ಸ್ಥಾನದ ಆಕಾಂಕ್ಷಿಯೂ ಹೌದು. ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೂ ಟಿಕೆಟ್ ರೇಸ್’ನಲ್ಲಿದ್ದು ಕುಂದಾಪುರ ಅಥವಾ ಬೈಂದೂರು ಕ್ಷೇತ್ರಕ್ಕೆ ಕಣ್ಣಿಟ್ಟಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುವುದು ಹೆಗ್ಡೆ ಅವರ ಪ್ಲಸ್ ಪಾಯಿಂಟ್. ಇನ್ನು 2013ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ. ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ದೊರೆತರೂ ಅಚ್ಚರಿಯಿಲ್ಲ. ಒಂದು ಹಂತದಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಕಿಶೋರ್ ಕುಮಾರ್ ಅವರನ್ನು ಬಿಜೆಪಿ ಮತ್ತೆ ಗುರುತಿಸಿ ಹುದ್ದೆಗಳನ್ನು ನೀಡುತ್ತಲೇ ಬಂದಿದೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಸದ್ಯ ಸೇವೆ ಸಲ್ಲಿಸುತ್ತಿರುವ ಅವರಿಗೆ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಜವಾಬ್ದಾರಿ, ಬೈಂದೂರು ವಿಧಾನಸಭಾ ಕ್ಷೇತ್ರ ಉಸ್ತುವಾರಿಯನ್ನು ನೀಡಲಾಗಿದೆ.

ಕಾಂಗ್ರೆಸ್ ಟಿಕೆಟ್ ಫಿಕ್ಸ್:
ಕಾಂಗ್ರೆಸ್ ಪಕ್ಷದಲ್ಲಿ ನಾಲ್ವರು ಆಕಾಂಕ್ಷಿಗಳಿದ್ದರೂ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರಿಗೆ ಟಿಕೆಟ್ ಫೈನಲ್ ಆಗಿದೆ. ಮೊಳಹಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿನೇಶ್ ಅವರು ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಜನರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು, ಸದ್ಯ ಕಾಂಗ್ರೆಸ್ ಪಕ್ಷದ ಭರವಸೆಯ ನಾಯಕ ಎಂದೆನಿಸಿಕೊಂಡಿದ್ದಾರೆ.

ಕಾಂಗ್ರೆಸ್ ಟಿಕೆಟ್’ಗೆ ಸಹಕಾರ ಕ್ಷೆತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶ್ಯಾಮಲಾ ಭಂಡಾರಿ, ಅಶೋಕ್ ಬಿಜಾಡಿ ಕೂಡ ಅರ್ಜಿ ಸಲ್ಲಿಸಿದ್ದರೂ ಅಂತಿಮವಾಗಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರಿಗೇ ಟಿಕೆಟ್ ಫೈನಲ್ ಆಗಿದೆ. /ಕುಂದಾಪ್ರ ಡಾಟ್ ಕಾಂ ವರದಿ/

ಒಟ್ಟು ಮತದಾರರು: 2,04,525
ಪುರುಷರು: 98224,
ಮಹಿಳೆಯರು: 106298

ಇದನ್ನೂ ಓದಿ:
► ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ ಎಷ್ಟು ಗೊತ್ತೆ? – https://kundapraa.com/?p=65599 .

ಜಾತಿ ಲೆಕ್ಕಾಚಾರ
ಒಟ್ಟು ಮತದಾರರು 2,04,525
ಬಂಟ್ಸ್ 48,000
ಬಿಲ್ಲವ 36,000
ಮೊಗವೀರ 27,000
ದೇವಾಡಿಗ 12,000
ಗಾಣಿಗ 8,000
ಕೊಂಕಣಿ ಖಾರ್ವಿ 10,000
ಕ್ರಿಶ್ಚಿಯನ್ 14,000
ಮುಸ್ಲಿಂ 17,000
ಇತರೆ 8,529

ಅಚ್ಚ ಕುಂದಾಪ್ರ ಕನ್ನಡದ ಊರು:
ಅಚ್ಚ ಕುಂದಾಪ್ರ ಕನ್ನಡದ ಸೊಗಡಿರುವ ಕ್ಷೇತ್ರದಲ್ಲಿ ತುಳು, ಬ್ಯಾರಿ, ಉರ್ದು, ಕೊಂಕಣಿ, ಕೊರಗ, ನವಾಯತಿಯಂಥ ಸಮುದಾಯ ಭಾಷೆಗಳು ಕೇಳಿಬರುತ್ತವೆ. ಕಾಡಿನಂಚಿನಲ್ಲಿ ಮರಾಠಿ, ಕುಡುಬಿಗಳಂಥ ಬುಡಕಟ್ಟು ಸಮುದಾಯವಿದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ, ಆನೆಗುಡ್ಡೆ ಶ್ರೀ ವಿನಾಯಕ, ಕುಂದಾಪುರದ ಶ್ರೀ ಕುಂದೇಶ್ವರ ಸೇರಿದಂತೆ ಹಲವು ಪ್ರಸಿದ್ಧ ದೇವಸ್ಥಾನಗಳಿವೆ. ದೈವಾರಾಧನೆ, ಪಾಣಾರಾಟ, ನಾಗಾರಾಧನೆ, ಯಕ್ಷಗಾನ ಹರಕೆ ಸಂಪ್ರದಾಯಗಳಿವೆ. ಕುಂದಾಪುರದ ರೋಸರಿ ಇಗರ್ಜಿ ಜಿಲ್ಲೆಯ ಪ್ರಮುಖ ಚರ್ಚ್ಗಳಲ್ಲಿ ಒಂದಾಗಿದೆ. ಸಾಹಿತ್ಯ, ಸಿನಿಮಾ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹಲವು ಸಾಧಕರನ್ನು ನೀಡಿದ ಹೆಗ್ಗಳಿಕೆ ಕುಂದಾಪುರದ್ದು. /ಕುಂದಾಪ್ರ ಡಾಟ್ ಕಾಂ ವರದಿ/

ಮೀನುಗಾರಿಕೆಯನ್ನು ಕುಂದಾಪುರ ಅವಲಂಬಿಸಿದೆ. ಆರ್ಥಿಕ ವಹಿವಾಟಿಗೆ ತೆಂಗಿನ ಫಸಲು ಮತ್ತು ಹೊಟೇಲ್ ಉದ್ಯಮ ಚೈತನ್ಯ ನೀಡಿದೆ. ಕುಂದಾಪುರದ ಗಣನೀಯ ಮಂದಿ ರಾಜ್ಯದ ವಿವಿಧ ಕಡೆ ಮತ್ತು ಮುಂಬೈ, ಹೈದರಾಬಾದ್, ಪುಣೆ ಮುಂತಾದೆಡೆ ಹೊಟೇಲ್ ನಡೆಸುತ್ತಿದ್ದಾರೆ. ಶೇ.65ಕ್ಕಿಂತ ಹೆಚ್ಚು ಜನರು ವ್ಯವಸಾಯೇತರ ಕಸುಬಿನಿಂದ ಬದುಕು ಸಾಗಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಹೊಡೆತಕ್ಕೆ ಕೃಷಿ ಗದ್ದೆಗಳಲೆಲ್ಲ ಕಟ್ಟಡಗಳು ಎದ್ದುನಿಂತಿವೆ. /ಕುಂದಾಪ್ರ ಡಾಟ್ ಕಾಂ ವರದಿ/

Exit mobile version