Kundapra.com ಕುಂದಾಪ್ರ ಡಾಟ್ ಕಾಂ

ಕಂಡ್ಲೂರು: ಅನ್ಯಕೋಮಿನ ಗುಂಪಿನಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

ಕುಂದಾಪುರ: ಸ್ನೇಹಿತನ ಮನೆಯಿಂದ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಕಂಡ್ಲೂರು ಜನತಾಕಾಲೋನಿಯ ಬಳಿ ಇಬ್ಬರು ಹಿಂದೂ ಯುವಕರನ್ನು ತಡೆದ ಅನ್ಯಕೋಮಿನ ಗುಂಪೊಂದು ಯುವಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿಯಾದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಹಲ್ಲೆಗೊಳಗಾದ ವಿಜಯಕುಮಾರ್(32) ಹಾಗೂ ಮಂಜುನಾಥ (29) ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರಿನನ್ವಯ ಶಾಹೀದ್ ಅಲಿ, ಸದಾಕತ್, ನದೀಮ್ ಹಾಗೂ ಸುಭಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆಯ ವಿವರ:
ಬಳ್ಕೂರು ನಿವಾಸಿ ವಿಜಯಕುಮಾರ್ ಎಂಬುವವರು ತನ್ನ ಸ್ನೇಹಿತ ಮಂಜುನಾಥನೊಂದಿಗೆ ಕಂಡ್ಲೂರು ಜನತಾಕಾಲೋನಿಯ ಸ್ನೇಹಿತನ ಮನೆಯಲ್ಲಿ ಹೊಸ್ತು ಊಟ ಮಾಡಿಕೊಂಡು ರಾತ್ರಿ 10:30ರ ಸುಮಾರಿಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಅವರ ಬೈಕನ್ನು ಅಡ್ಡಗಟ್ಟಿದ ಅನ್ಯಕೋಮಿನ ಯುವಕರ ಗುಂಪು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ಹಲ್ಲೆಗೊಳಗಾದ ವಿಜಯ ಹಾಗೂ ಮಂಜುನಾಥ ಅವರ ಅರಚಾಟ ಹೇಳಿ ಅವರ ಸ್ನೇಹಿತರು ಓಡಿ ಬಂದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. (ಕುಂದಾಪ್ರ ಡಾಟ್ ಕಾಂ)

ಕಂಡ್ಲೂರಿನಲ್ಲಿ ಶಾರದೋತ್ಸವದ ಕುರಿತು ಬ್ಯಾನರ್ ಅಳವಡಿಸುವ ಕುರಿತು ವಿರೋಧ ವ್ಯಕ್ತಪಡಿಸಿದ್ದ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆಗೆ ಮುಂದಾಗಿತ್ತು ಎನ್ನಲಾಗಿದೆ. ಘಟನೆಯ ಬಗ್ಗೆ ಕುಂದಾಪುರ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಆರು ಮಂದಿಯನ್ನು ಗುರುತಿಸಲಾಗಿದ್ದು ಆ ಪೈಕಿ ನಾಲ್ವರನ್ನು ಬಂಧಿಸಿ. ಇನ್ನಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ. (ಕುಂದಾಪ್ರ ಡಾಟ್ ಕಾಂ)

ಕಂಡ್ಲೂರಿನಲ್ಲಿ ಪೊಲೀಸ್ ಕಗ್ಗಾವಲು:
ಘಟನೆ ನಡೆದ ಬಳಿಕ ಮುಂಜಾಗ್ರತಾ ಕ್ರಮವಾಗಿ ಕಂಡ್ಲೂರು ಭಾಗದಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಏರ್ಪಡಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಸುದರ್ಶನ್ ಸೇರಿದಂತೆ ಪೊಲೀಸರ ದಂಡು ಅಲ್ಲಿಯೇ ಬೀಡುಬಿಟ್ಟಿದೆ.

ಸಂಸದೆ ಕರಂದ್ಲಾಜೆ ಭೇಟಿ:
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆಸ್ಟತ್ರೆಗೆ ಭೇಟಿ ನೀಡಿ ಗಾಯಾಳು ಮಂಜುನಾಥ್ ಹಾಗೂ ವಿಜಯ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇತ್ತಿಚಿಗೆ ಈ ಭಾಗದಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರು ಎಚ್ಚೆತ್ತುಕೊಂಡು ಇದಕ್ಕೊಂದು ಅಂತ್ಯ ಹಾಡಬೇಕಿದೆ ಎಂದರು. (ಕುಂದಾಪ್ರ ಡಾಟ್ ಕಾಂ)

Exit mobile version