ಕುಂದಾಪ್ರ ಡಾಟ್ ಕಾಂ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕೂಸಳ್ಳಿ ಫಾಲ್ಸ್‌ನಲ್ಲಿ ಶುಕ್ರವಾರ ಸಂಜೆ ಈಜುವ ಸಂದರ್ಭ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೃತದೇಹ ಶನಿವಾರ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ (20) ಎಂದು ತಿಳಿದುಬಂದಿದೆ. ಈತ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೋರ್ಸ್ ಕಲಿಯುತ್ತಿದ್ದ.
ಶುಕ್ರವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರಾದ ಕಿರ್ತನ್ ದೇವಾಡಿಗ, ಅಕ್ಷಯ್ ಆಚಾರಿ, ಆಲ್ವಿನ್, ಧರಣ್, ರೆಯಾನ್ ಜೊತೆಗೆ ಗುರುವಾರ ಬೈಂದೂರಿಗೆ ಬಂದಿದ್ದು, ಅಕ್ಷಯ್ ಆಚಾರಿ ಮನೆಯಲ್ಲಿ ಎಲ್ಲರೂ ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೀರ್ತನ್ ದೇವಾಡಿಗನ ಮನೆಯಲ್ಲಿ ಊಟ ಮುಗಿಸಿ 3.30ರ ಸುಮಾರಿಗೆ ಬೈಕಿನಲ್ಲಿ ಕೊಸಳ್ಳಿ ಫಾಲ್ಸ್‌ಗೆ ಹೋಗಿದ್ದರು. ಚಿರಾಂತ್ ಶೆಟ್ಟಿಗೆ ಮಾತ್ರ ಈಜು ಬರುತ್ತಿದ್ದರಿಂದ ಆತ ಈಜಲು ನೀರಿಗಿಳಿದರೇ, ಉಳಿದವರು ದಡದಲ್ಲಿಯೇ ಕುಳಿತಿದ್ದರು.
ನೀರಿಗಿಳಿದ ಚಿರಾಂತ್ ಕೆಳ ಹೊತ್ತಿನಲ್ಲೇ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಶುಕ್ರವಾರ ಸಂಜೆಯೇ ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ರಾತ್ರಿಯ ತನಕ ಹುಡುಕಾಟ ನಡೆಸಿದ್ದಾರೆ. ಶನಿವಾರ ಮತ್ತೆ ಕಾರ್ಯಾಚರಣೆ ನಡೆಸಿದ್ದು ಅಂತಿಮವಾಗಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
► ಕೂಸಳ್ಳಿ ಫಾಲ್ಸ್‌ನಲ್ಲಿ ಈಜಲು ತೆರಳಿದ ವಿದ್ಯಾರ್ಥಿ ನಾಪತ್ತೆ – https://kundapraa.com/?p=65845 .