Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಗ್ರಾಮ ಲೆಕ್ಕಿಗರ ಕಛೇರಿ ಕಾನೂನು ಬಾಹಿರ – ಸಾರ್ವಜನಿಕರಿಂದ ಪ್ರತಿಭಟನೆ

ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರೇ ಸ್ವ ಇಚ್ಚೆಯಿಂದ ಒತ್ತುವರಿ ಮಾಡಿಕೊಂಡ ಜಾಗವನ್ನು ಬಿಟ್ಟುಕೊಡುತ್ತಿರುವಾಗ, ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಕಛೇರಿಯನ್ನು ಮಾತ್ರ ರಸ್ತೆಯ ಪಕ್ಕದಲ್ಲೇ ಕಟ್ಟುತ್ತಿರುವುದು ಸಮಂಜಸವಾದುದಲ್ಲ ಎಂದು ಕುಂದಾಪುರ ಪುರಸಭಾ ಸದಸ್ಯ ರಾಜೇಶ್ ಕಾವೇರಿ ಹೇಳಿದರು.

ಅವರು ಸರಕಾರಿ ಆಸ್ಪತ್ರೆಯ ಎದರು ರಸ್ತೆ ಪಕ್ಕದಲ್ಲಿ ಕಟ್ಟುತ್ತಿರುವ ಗ್ರಾಮ ಲೆಕ್ಕಿಗರ ಕಛೇರಿಯನ್ನು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕವೆಂದು ಆರೋಪಿಸಿ, ನಿರ್ಮಾಣ ಹಂತದಲ್ಲಿರುವ ಕಛೇರಿಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಸಾರ್ವಜನಿಕರ ಎಲ್ಲಾ ಕೆಲಸವು ಒಂದೇ ಸೂರಿನಡಿಯಲ್ಲಿ ಆಗಬೇಕೆಂಬ ಕಾರಣದಿಂದ ಮಿನಿ ವಿಧಾನಸೌಧವನ್ನು ಕಟ್ಟಲಾಗಿದೆ. ಆದರೆ ಕುಂದಾಪುರ ಹೂವಿನ ಮಾರುಕಟ್ಟೆಯ ಬಳಿ ಇರುವ ಗ್ರಾಮಲೆಕ್ಕಿಗರ ಕಛೇರಿ ಮಾತ್ರ ಇದರಿಂದ ಹೊರತಾಗಿರುವುದು ವಿಪರ್ಯಾಸವೇ ಸರಿ. ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಕಛೇರಿಯಿಂದ ಮತ್ತಷ್ಟು ಸಮಸ್ಯೆ ಉದ್ಬವಿಸಬಹುದು. ತಾಲೂಕು ಆಡಳಿತ ಶೀಘ್ರವೇ ವಾಸ್ತವವನ್ನು ಮನಗಂಡು ನಾಗರೀಕರ ಬೇಡಿಕೆಗೆ ಸ್ಪಂದಿಸಬೇಕಿದೆ ಎಂದರು.

ರಾಜ್ಯ ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಮಾತನಾಡಿ ಖಾಸಗಿಯವರು ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಲು ನೂರಾರು ದಾಖಲೆಗಳನ್ನು ಕೇಳುವ ಇಲಾಖೆಗಳಿಗೆ, ಸರ್ಕಾರಿ ಕಟ್ಟಡಗಳಿಗೂ ಇದೆ ನಿಯಮ ಅನ್ವಯವಾಗುತ್ತದೆಂಬ ಪ್ರಜ್ಞೆ ಇಲ್ಲವೇ ಎಂದು ಪ್ರಶ್ನಿಸಿದರು. ಇಲ್ಲಿ ಗ್ರಾಮ ಲೆಕ್ಕಿಗರ ಕಛೇರಿಯನ್ನು ಕಟ್ಟಿ ಸಾರ್ವಜನಿಕರನ್ನು ಅಲೆದಾಡಿಸುವ ಬದಲಿಗೆ ಅವರಿಗೆ ಉಪಯೋಗವಾಗುವ ಯಾವುದಾದರೂ ಕೈಗೊಳ್ಳಲಿ ಎಂದರು. (ಕುಂದಾಪ್ರ ಡಾಟ್ ಕಾಂ ವರದಿ)

ಪ್ರತಿಭಟನೆಯಲ್ಲಿ ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು, ರೋಟರಿ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜೆಸಿಐನ ರತ್ನಾಕರ, ಹುಸೇನ್ ಹೈಕಾಡಿ, ಸಿಐಟಿಯು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ಬಿಜೆಪಿ ಯುವ ಮೋರ್ಚಾದ ಶಂಕರ ಅಂಕದಕಟ್ಟೆ, ಜೋಯ್ ಕಾರ್ವಾಲೊ ಮೊದಲಾದವರು ಮಾತನಾಡಿದರು.

ಪುರಸಭಾ ಸದಸ್ಯರಾದ ರವಿರಾಜ ಖಾರ್ವಿ, ವಿಠಲ್ ಕುಂದರ್, ವಿಜಯ್, ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಪೂಜಾರಿ, ಪುಂಡಲೀಕ ನಾಯಕ್, ಗೋಪಾಲ್ ಕಳಿಂಜೆ ಮೊದಲಾದವರು ಭಾಗವಹಿಸಿದ್ದರು. ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಪುರಸಭಾ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಗ್ರಾಮಲೆಕ್ಕಿಗರ ಮಿನಿ ಕಛೇರಿಗೂ ಮಿನಿ ವಿಧಾನಸೌಧದಲ್ಲಿ ಜಾಗವಿಲ್ಲ! – ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ 

Exit mobile version